ಪಶ್ಚಿಮ ಏಷ್ಯಾ ಉದ್ವಿಗ್ನತೆ: ಭಾರತದಿಂದ ಅಧಿಕೃತ ಹೇಳಿಕೆ ಬಿಡುಗಡೆ; ಗಲ್ಫ್ನಲ್ಲಿ ಭಾರತೀಯರ ಸುರಕ್ಷತೆ ಕುರಿತು ಕಾಳಜಿ

Share with

ನವದೆಹಲಿ, ಮಾರ್ಚ್ 3: ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಯುದ್ಧದ (Iran war) ಕುರಿತು ಭಾರತ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದೆ. ಇರಾನ್ ಮತ್ತು ಗಲ್ಫ್ನಲ್ಲಿ ಬಿಕ್ಕಟ್ಟು ಶುರುವಾಗಿರುವುದು ಹಾಗೂ ಅದರಿಂದ ಸಾವು ನೋವುಗಳಾಗಿ ಸಹಜ ಬದುಕು ಅಸ್ತವ್ಯಸ್ತಗೊಳ್ಳುತ್ತಿರುವುದಕ್ಕೆ ಭಾರತ ಆತಂಕ ವ್ಯಕ್ತಪಡಿಸಿದೆ. ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಕೋಟಿ ಸಂಖ್ಯೆಯ ಭಾರತೀಯರ ಸುರಕ್ಷತೆ ಬಗ್ಗೆ ಚಿಂತೆ ವ್ಯಕ್ತಪಡಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿದ್ದು, ಎಲ್ಲಾ ಕಡೆಗಳಿಂದ ಮಾತುಕತೆಗಳಾಗಿ, ಬಿಕ್ಕಟ್ಟು ಅಂತ್ಯಗೊಳ್ಳುವಂತಾಗಲಿ ಎಂದು ಮನವಿ ಮಾಡಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ಈ ಬಿಕ್ಕಟ್ಟಿನ ತೀವ್ರತೆ ಹೆಚ್ಚಾಗಿ, ಇತರ ದೇಶಗಳಿಗೆ ಅದು ಹರಡುವುದನ್ನು ನಾವು ಕಂಡಿದ್ದೇವೆ. ವಿನಾಶ ಮತ್ತು ಸಾವು ಹೆಚ್ಚಿದ್ದು, ಸಹಜ ಜೀವನ ಮತ್ತು ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಪ್ರಮುಖ ನೆರೆಯ ದೇಶವಾದ ನಮಗೆ ಈ ಪ್ರದೇಶದ ಭದ್ರತೆ ಮತ್ತು ಸ್ಥಿರತೆ ಮುಖ್ಯವಾಗಿದ್ದು, ಈ ಬೆಳವಣಿಗೆಗಳನ್ನು ಆತಂಕದಿಂದ ಗಮನಿಸುತ್ತಿದ್ದೇವೆ’ ಎಂದು ವಕ್ತಾರರು ತಿಳಿಸಿದ್ದಾರೆ.

‘ಗಲ್ಫ್ ಪ್ರದೇಶದಲ್ಲಿ ವಾಸಿಸುತ್ತಿರುವ ಮತ್ತು ಕೆಲಸ ಮಾಡುತ್ತಿರುವ ಭಾರತೀಯ ಸಂಖ್ಯೆ ಒಂದು ಕೋಟಿ ಹತ್ತಿರ ಇದೆ. ಇವರಿಗೆ ಋಣಾತ್ಮಕವಾಗಿ ಪರಿಣಾಮ ಬೀರುವಂತಹ ಯಾವುದೇ ಘಟನೆಯನ್ನು ಕಣ್ಮುಚ್ಚಿ ನೋಡಿಕೊಂಡಿರಲು ಆಗುವುದಿಲ್ಲ. ನಮ್ಮ ವ್ಯಾಪಾರ ಮತ್ತು ಇಂಧನ ಸರಬರಾಜು ಸರಪಳಿಯೂ ಈ ಭೂಭಾಗದಲ್ಲಿದೆ. ದೊಡ್ಡ ವಿಪತ್ತು ಬಂದರೆ ಭಾರತೀಯ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜಾಗತಿಕ ಕಾರ್ಮಿಕಸಮೂಹದಲ್ಲಿ ಪ್ರಮುಖವೆನಿಸಿರುವ ನಾಗರಿಕರನ್ನು ಹೊಂದಿರುವ ದೇಶವಾಗಿ ಭಾರತವು ಸರಕು ಸಾಗಣೆ ಹಡಗಿನ ಮೇಲಿನ ದಾಳಿಯನ್ನು ಪ್ರಬಲವಾಗಿ ವಿರೋಧಿಸುತ್ತದೆ. ಈಗಾಗಲೇ ಕೆಲ ಭಾರತೀಯ ರಾಷ್ಟ್ರೀಯರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಕಾಣೆಯಾಗಿದ್ದಾರೆ’ ಎಂದು ಭಾರತದ ವತಿಯಿಂದ ಬಿಡುಗಡೆಯಾದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಂಧಾನ ಮತ್ತು ರಾಜತಾಂತ್ರಿಕ ಮಾತುಕತೆಗಳು ನಡೆಯಬೇಕು. ಈ ಬಿಕ್ಕಟ್ಟು ಬೇಗ ಅಂತ್ಯಗೊಳ್ಳಬೇಕು ಎಂದು ಹಾರೈಸಿರುವ ಭಾರತ, ಸರ್ಕಾರವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ರಾಷ್ಟ್ರೀಯ ಹಿತಾಸಕ್ತಿ ಪ್ರಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದೆ.

ಬಾಧಿತ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ರಾಜತಾಂತ್ರಿಕ ಕಚೇರಿಗಳು ಭಾರತೀಯ ನಾಗರಿಕರು ಹಾಗೂ ಸಮುದಾಯ ಸಂಘಟನೆಗಳೊಂದಿಗೆ ನಿಕಟ ಸಂಪರ್ಕದಲ್ಲಿವೆ. ನಿಯಮಿತವಾಗಿ ನಿರ್ದೇಶನಗಳನ್ನು ನೀಡುತ್ತಿವೆ. ಬಾಧಿತ ನಾಗರಿಕರಿಗೆ ಸಾಧ್ಯವಾದ ನೆರವು ಒದಗಿಸಲಾಗುತ್ತಿದೆ. ಈ ಪ್ರದೇಶದ ಸರ್ಕಾರಗಳು ಹಾಗೂ ಇತರ ಪ್ರಮುಖ ಪಾಲುದಾರರೊಂದಿಗೆ ಸಂಪರ್ಕದಲ್ಲಿರಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *