ಮುಂಬೈನಲ್ಲಿ ‘ರಾಮಾಯಣ 2’ ಶೂಟಿಂಗ್ ಶುರು ಮಾಡಿದ ನಟ ರಣಬೀರ್ ಕಪೂರ್

Share with

ನಟ ರಣಬೀರ್ ಕಪೂರ್ ಅವರು ಈಗಾಗಲೇ ‘ರಾಮಾಯಣ’ ಸಿನಿಮಾದ ಮೊದಲ ಪಾರ್ಟ್ ಚಿತ್ರೀಕರಣ ಮುಗಿಸಿದ್ದಾರೆ. ಈಗ ಅವರು ‘ರಾಮಾಯಣ 2’ (Ramayana 2) ಚಿತ್ರೀಕರಣ ಶುರು ಮಾಡಿದ್ದಾರೆ. ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಎರಡು ಪಾರ್ಟ್ಗಳಲ್ಲಿ ರಿಲೀಸ್ ಆಗಲಿದೆ. ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿರುವ ರಣಬೀರ್ ಕಪೂರ್ (Ranbir Kapoor) ಈಗಾಗಲೇ ‘ರಾಮಾಯಣ 2’ ಸೆಟ್‌ಗೆ ಬಂದಿದ್ದು, ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಶೀಘ್ರದಲ್ಲೇ ಸನ್ನಿ ಡಿಯೋಲ್ ಕೂಡ ಶೂಟಿಂಗ್ ಸೆಟ್ ಸೇರಿಕೊಳ್ಳಲಿದ್ದಾರೆ.

ರಣಬೀರ್ ಕಪೂರ್ ಮಾರ್ಚ್ ತಿಂಗಳಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ ‘ಲವ್ ಆ್ಯಂಡ್ ವಾರ್’ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಬೇಕಿತ್ತು. ಆದರೆ, ಬನ್ಸಾಲಿ ಅವರ ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ಆ ಚಿತ್ರದ ಚಿತ್ರೀಕರಣವು ಮೇ ತಿಂಗಳಿಗೆ ಮುಂದೂಡಲ್ಪಟ್ಟಿದೆ. ಈ ಬಿಡುವಿನ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ನಿರ್ಧರಿಸಿರುವ ರಣಬೀರ್, ತಮ್ಮ ಸಂಪೂರ್ಣ ಗಮನವನ್ನು ಈಗ ‘ರಾಮಾಯಣ 2’ ಕಡೆಗೆ ಹರಿಸಿದ್ದಾರೆ.

‘ರಾಮಾಯಣ’ ಚಿತ್ರದ ಎರಡನೇ ಭಾಗದಲ್ಲಿ ಶ್ರೀರಾಮ ಮತ್ತು ಹನುಮಂತನ ಭೇಟಿಯ ದೃಶ್ಯಗಳು ಅತ್ಯಂತ ಪ್ರಮುಖವಾಗಿವೆ. ಹನುಮಂತನ ಪಾತ್ರದಲ್ಲಿ ಬಾಲಿವುಡ್‌ನ ಹಿರಿಯ ನಟ ಸನ್ನಿ ಡಿಯೋಲ್ ಕಾಣಿಸಿಕೊಳ್ಳುತ್ತಿದ್ದು, ಅವರು ಮಾರ್ಚ್ 20ರ ಸುಮಾರಿಗೆ ಚಿತ್ರೀಕರಣಕ್ಕೆ ಬರಲಿದ್ದಾರೆ. ಮಾರ್ಚ್‌ನಿಂದ ಮೇ ತಿಂಗಳವರೆಗೆ ರಣಬೀರ್ ಮತ್ತು ಸನ್ನಿ ಡಿಯೋಲ್ ಅವರ ಕಾಂಬಿನೇಶನ್ ದೃಶ್ಯಗಳನ್ನು ಚಿತ್ರೀಕರಿಸಲು ಪ್ಲಾನ್ ಮಾಡಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ.

ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರಿಗೆ ಜೋಡಿಯಾಗಿ ಸಾಯಿ ಪಲ್ಲವಿ ಅವರು ನಟಿಸುತ್ತಿದ್ದು, ಸೀತೆಯ ಪಾತ್ರ ಮಾಡುತ್ತಿದ್ದಾರೆ. ನಮಿತ್ ಮಲ್ಹೋತ್ರಾ ಅವರು ಈ ಬೃಹತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದ ಮೊದಲ ಭಾಗ ಈ ವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ಅದ್ದೂರಿಯಾಗಿ ಬಿಡುಗಡೆ ಆಗಲಿದೆ.

ಘಟಾನುಘಟಿ ಕಲಾವಿದರು ‘ರಾಮಾಯಣ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಟ ಯಶ್ ಅವರು ರಾವಣನ ಪಾತ್ರ ಮಾಡುತ್ತಿರುವುದು ವಿಶೇಷ. ಈ ಸಿನಿಮಾದಲ್ಲಿ ಗ್ರಾಫಿಕ್ಸ್ ದೃಶ್ಯಗಳು ಹೇರಳವಾಗಿರಲಿವೆ. ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರು ಈ ಸಿನಿಮಾದ ಫೈನಲ್ ಕಟ್ ನೋಡಿ ಸಲಹೆ ನೀಡಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.


Share with

Leave a Reply

Your email address will not be published. Required fields are marked *