36 ವರ್ಷಗಳ ಬಳಿಕ ಮತ್ತೆ ರಾಜ್ಯದ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ..! ಸುಳಿವು ನೀಡಿದ ಸಿಎಂ

Share with

ಬೆಂಗಳೂರು: ರಾಜ್ಯದ ಕಾಲೇಜು, ವಿವಿಗಳಲ್ಲಿ ಸುಮಾರು 3 ದಶಕಗಳ ಬಳಿಕ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಕಾಲೇಜು ಚುನಾವಣೆ ನಡೆಸುವ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ವತಿಯಿಂದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರ ಸಂಚಾಲಕತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದಾರೆ. ಈ ಸಮಿತಿ ಅಧ್ಯಯನದಲ್ಲಿ ನಿರತವಾಗಿರುವಾಗಲೇ ಕಾಲೇಜು ಚುನಾವಣೆ ಪರಿಚಯಿಸಲು ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್‌ನಲ್ಲಿ ಉತ್ಸಾಹ ತೋರಿದ್ದಾರೆ.

ತಮ್ಮ ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳು, ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಣೆಗಾರಿಕೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸಲು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಉದ್ದೇಶಿಸಿರುವುದಾಗಿ ತಿಳಿಸಿದ್ದಾರೆ. ತನ್ಮೂಲಕ ಮುಂದಿನ ದಿನಗಳಲ್ಲಿ ಕಾಲೇಜುಗಳಲ್ಲಿ ಚುನಾವಣೆ ನಡೆಸಲು ಸರ್ಕಾರ ತೀರ್ಮಾನಿಸಿರುವುದು ಬಹಿರಂಗವಾಗಿದೆ.

ಮುಖ್ಯಮಂತ್ರಿಗಳು ತಮ್ಮ ಬಜೆಟ್ ನಲ್ಲಿ ಕಾಲೇಜು ಚುನಾವಣೆಯ ಬಗ್ಗೆ ಉಲ್ಲೇಖಿಸಿರುವುದರಿಂದ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕ್ಯಾಂಪಸ್ ರಾಜಕಾರಣ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ. 3 ದಶಕಗಳ ಹಿಂದೆ ರಾಜ್ಯದಲ್ಲಿ ಅಂತ್ಯವಾಗಿದ್ದ ಕಾಲೇಜು ಚುನಾವಣೆ ಮತ್ತೆ ಮುನ್ನೆಲೆಗೆ ಬಂದಿದೆ.

ರಾಜ್ಯದಲ್ಲಿ 1970 ಮತ್ತು 1980ರ ದಶಕದಲ್ಲಿ ಕಾಲೇಜು ಚುನಾವಣೆಗಳು ಮತ್ತು ಕಾಲೇಜು ರಾಜಕಾರಣ ಉಚ್ಚಾಯ ಸ್ಥಿತಿಯಲ್ಲಿತ್ತು. ರಾಜ್ಯದ ನೆಲ, ಜಲ, ಭಾಷೆ ಸಂಬಂಧಿಸಿದ ಹೋರಾಟಗಳ ಜೊತೆಗೆ ಪ್ರಚಲಿತ ವಿದ್ಯಮಾನಗಳು ಮತ್ತು ಶಿಕ್ಷಣ ಸಂಬಂಂಧಿ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಹೊಂದಿದ್ದವು, ಆದರೆ 1980ರ ದಶಕದಲ್ಲಿ ಕಾಲೇಜು ಚುನಾವಣೆಗಳಲ್ಲಿ ಹೊರಗಿನ ರಾಜಕೀಯ ಹಸ್ತಕ್ಷೇಪ ಮಿತಿ ಮೀರಿ, ವಿದ್ಯಾರ್ಥಿಗಳು ರಾಜಕೀಯ ಪಕ್ಷಗಳ ಉಪಕರಣಗಳಂತೆ ವರ್ತಿಸಲು ಪ್ರಾರಂಭಿಸಿ ಕಾಲೇಜಿನಲ್ಲಿ ವೈಷಮ್ಯದ ವಾತಾವರಣಕ್ಕೆ ಕಾರಣವಾದ ಘಟನೆಗಳು ಸಾಕಷ್ಟು ನಡೆದವು.

ಈ ಹಿನ್ನೆಲೆಯಲ್ಲಿ 1989ರಲ್ಲಿ ಆಡಳಿತದಲ್ಲಿದ್ದ ವಿರೇಂದ್ರ ಪಾಟೀಲ್ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಕಾಲೇಜು ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ನಿಷೇಧಿಸಿತ್ತು. ಆದರೆ ಇದೀಗ ಕಾಲೇಜು ಚುನಾವಣೆಯನ್ನು ಮರು ಪರಿಚಯಿಸುತ್ತಿರುವುದಕ್ಕೆ ಸಾಕಷ್ಟು ವಿರೋಧಗಳಿವೆ. ಮತ್ತೆ ಕ್ಯಾಂಪಸ್ ವಾತಾವರಣ ಹದಗೆಡಬಹುದು ಎಂದು ಕೆಲವರು ಅಭಿಪ್ರಾಯ ಪಡುತ್ತಿದ್ದಾರೆ. ಇದೀಗ ಖುದ್ದು ಮುಖ್ಯಮಂತ್ರಿಗಳೇ ಕಾಲೇಜು ಚುನಾವಣೆಗೆ ಆಸಕ್ತಿ ಮೂಡಿಸಿರುವ ಹಿನ್ನೆಲೆಯಲ್ಲಿ ಕಾಲೇಜು ಚುನಾವಣೆ ನಡೆಯುವುದು ನಿಚ್ಚಳವಾಗಿದೆ. ಆದರೆ ಕಾಲೇಜು ಚುನಾವಣೆಗೆ ನೀತಿ ನಿಯಮಗಳು ಪ್ರಕಟಗೊಳ್ಳಬೇಕಿದೆ.


Share with

Leave a Reply

Your email address will not be published. Required fields are marked *