ರಾಜ್ಯದ 3 ಕಡೆ ಇ-ಕೋರ್ಟ್ ಸ್ಥಾಪನೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ರಚಿಸಲಾಗುವ ಎಲ್ಲಾ ಕಾನೂನುಗಳನ್ನು ಕನ್ನಡದಲ್ಲಿ ಸಿದ್ಧಪಡಿಸುವುದರ ಜೊತೆಗೆ ಕೇಂದ್ರ ಸರ್ಕಾರ ಇಲ್ಲಿಯವರೆಗೂ ಜಾರಿ ತಂದಿರುವ ಎಲ್ಲಾ ಕಾನೂನುಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.
ಇದಲ್ಲದೆ ನ್ಯಾಯಾಂಗ ವ್ಯವಸ್ಥೆಯನ್ನು ಸುಧಾರಣೆಗೊಳಿಸಲು ಮೂಲಭೂತ ಸೌಕರ್ಯಗಳಾದ ಕೋರ್ಟ್ ಕಟ್ಟಡ ಹಾಗೂ ನ್ಯಾಯಾಧೀಶರಿಗೆ ವಸತಿ ಗೃಹ ನಿರ್ಮಾಣಕ್ಕಾಗಿ 175 ಕೋಟಿ ರೂ.ಗಳನ್ನು ಒದಗಿಸಲು ಬಜೆಟ್ ನಲ್ಲಿ ಭರವಸೆ ನೀಡಲಾಗಿದೆ.
- ಕಾಗದರಹಿತ, ಸಮರ್ಥ ಮತ್ತು ನಾಗರಿಕ-ಕೇಂದ್ರಿತ ನ್ಯಾಯಾಂಗವನ್ನು ಜಾರಿಗೆ ತರಲು ಬೆಂಗಳೂರು, ಧಾರವಾಡ, ಕಲಬುರಗಿ ಮತ್ತು ಮೈಸೂರು ನಗರಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಪ್ರಾಯೋಗಿಕವಾಗಿ ‘ಇ-ಕೋರ್ಟ್’ ಗಳ ಸ್ಥಾಪನೆ.
- ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣ.
- ಅಡ್ವಕೇಟ್ ಜನರಲ್ರವರ ಕಚೇರಿಗೆ ಗ್ರಂಥಾಲಯ, ವಿ.ಸಿ. ಸೌಲಭ್ಯ ಒದಗಿಸಲು ಹಾಗೂ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಕಛೇರಿಗಳಲ್ಲಿನ CCMS ಮತ್ತು e-filing ಗೆ ಅಗತ್ಯವಿರುವ ಮೂಲ ಸೌಕರ್ಯವನ್ನು ಉನ್ನತೀಕರಣಕ್ಕೆ 5 ಕೋಟಿ ರೂ.
- ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕ ಇತ್ಯರ್ಥಗೊಳಿಸಿ ಕಡಿಮೆ ಮಾಡಬಹುದಾಗಿದ್ದು, ಮಧ್ಯಸ್ಥಿಕೆಯಲ್ಲಿ ಆಸಕ್ತಿ ಇರುವ ನ್ಯಾಯಾಧೀಶರು ಮತ್ತು ವಕೀಲರಿಗೆ ತರಬೇತಿ.




