ಮಂಗಳಾದೇವಿ ದೇವಸ್ಥಾನದ ಜಾತ್ರೋತ್ಸವ

Share with

ಮಂಗಳೂರು: ಇಲ್ಲಿನ ಬೋಳಾರದ ಮಹಾತೋಭಾರ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಶನಿವಾರ ವೈಭವದಿಂದ ಆರಂಭಗೊಂಡಿತು.

ನಗರದ ಅಧಿದೇವತೆಯಾದ ಮಂಗಳಾದೇವಿಗೆ ಮಧ್ಯಾಹ್ನ ಮಹಾಪೂಜೆ ನೆರವೇರಿಸಿ ದೇವರನ್ನು ಗರ್ಭಗುಡಿಯಿಂದ ದೇವಳದ ಹೊರಕ್ಕೆ ತರಲಾಯಿತು. ಪ್ರದಕ್ಷಿಣೆ ಹಾಕಿ ಸುತ್ತುಬಲಿ ನಡೆಸಿದ ಬಳಿಕ ಧ್ವಜಾರೋಹಣ ಮಾಡಿ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಅರ್ಪಿಸಿದ ಸೀಯಾಳ, ಬಾಳೆಗೊನೆ, ಅಡಿಕೆಗೊನೆ, ಹೂವುಗಳನ್ನು ಧ್ವಜಸ್ತಂಭಕ್ಕೆ ಕಟ್ಟಲಾಯಿತು. ಬಳಿಕ ಅನ್ನ ಸಂತರ್ಪಣೆ ನಡೆಯಿತು. ನೂರಾರು ಭಕ್ತರು ದೇವಿಯ ಪ್ರಸಾದ ಸ್ವೀಕರಿಸಿದರು.

ಸಂಜೆ ಬೋಳಾರದ ಶ್ರೀಮಂಗಳಾದೇವಿ ಕರ ಸೇವಕರ ಸಹಯೋಗದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ತಂಡಗಳಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಯೂನಿಯನ್‌ ಬ್ಯಾಂಕ್ ಆಫ್ ಇಂಡಿಯಾ ಜನರಲ್ ಮ್ಯಾನೇಜರ್ ರಾಜೇಂದ್ರ ಕುಮಾ‌ರ್ ಉದ್ಘಾಟಿಸಿದರು.

ಮುಂಜಾನೆ ಪ್ರಾತಃಕಾಲ ಪೂಜೆ, ನವಕ ಕಲಶಾಭಿಷೇಕ, ಗಣ ಹೋಮ ನಡೆದವು. ಸಂಜೆ ಬಯನ ಬಲಿ, ಮಹಾಪೂಜೆ, ಭೂತ ಬಲಿ ನಡೆದವು. ಉಚ್ಚಿಲತ್ತಾಯ ನೀಲೇಶ್ವರ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ದೇವಸ್ಥಾನದ ಆನುವಂಶಿಕ ಮೊಕ್ತೇಸರರಾದ ಜಿ. ರಘುರಾಮ ಉಪಾಧ್ಯಾಯ, ಎಸ್. ಹರೀಶ್ ಐತಾಳ್, ಆನುವಂಶಿಕ ಆಡಳಿತ ಮೊಕ್ತೇಸರ ಪರ್ಯಾಯ ಪ್ರಧಾನ ಅರ್ಚಕ ಎಂ. ಅರುಣ್ ಐತಾಳ್ ಭಾಗವಹಿಸಿದ್ದರು. ದೇವಸ್ಥಾನವನ್ನು ಹೂವು ಮತ್ತು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು.


Share with

Leave a Reply

Your email address will not be published. Required fields are marked *