ಬಜಪೆ: ತೆಂಕ ಎಡಪದವು ಗ್ರಾಮದ ಸಾಸ್ತಾವು ದೇವಸ್ಥಾನದ ಬಳಿ ಫಾರ್ಚೂನರ್ ಕಾರಿನಲ್ಲಿ ದನಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಗಸ್ತು ನಿರತ ಬಜಪೆ ಪೊಲೀಸರು, ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜಾನುವಾರುಗಳನ್ನು ರಕ್ಷಿಸಲಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ.

ಕಾರಿನಲ್ಲಿ 4 ದನಗಳನ್ನು ಕೈ ಕಾಲು ಕಟ್ಟಿ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿತ್ತು. ದನಗಳನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಬಂದು, ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ವಶಕ್ಕೆ ಪಡೆದ ಕಾರಿನ ಅಂದಾಜು ಮೊತ್ತ 8 ಲಕ್ಷ ರೂಪಾಯಿ ಆಗಬಹುದು. ಕಾರಿನಲ್ಲಿ ಒಂದು ತಲವಾರು, ಕಬ್ಬಿಣದ ರಾಡ್ 1, ನೈಲಾನ್ ಹಗ್ಗಗಳು 3, ಡಿಎಲ್ 10 ಎಎನ್ 6227 ನಂಬರ್‌ಪ್ಲೇಟ್ ಗಳು 2 ಹಾಗೂ ನೀಲಿ ಬಣ್ಣದ ಟಾರ್ಪಾಲ್ ಸಿಕ್ಕಿದೆ. ಜಾನುವಾರು ಸಹಿತ ವಶಕ್ಕೆ ಪಡೆದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 8,42,000 ರೂಪಾಯಿ ಎಂದು ಅಂದಾಜಿಸಲಾಗಿದೆ.




