ಹೊಸದಿಲ್ಲಿ: ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಅತ್ಯಂತ ಅಪರೂಪದ ಪ್ರಸಂಗವೊಂದು ಶನಿವಾರ (ಏ.11) ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಆವರಣದಲ್ಲಿ ವಿರೋಧ ಪಕ್ಷದ ನಾಯಕ (ಎಲ್ಒಪಿ) ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ್ದು, ವಿಡಿಯೋ ವೈರಲ್ ಆಗಿದೆ.

ಸಂಸತ್ತಿನ ಸಂಕೀರ್ಣದ ಮೂಲಕ ತೆರಳುವಾಗ ಪ್ರಧಾನಿ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದರು. ಆ ಮಾತುಕತೆಯ ವೀಡಿಯೊ ನಂತರ ವೈರಲ್ ಆಯಿತು.
ಸಂಸತ್ತಿನ ಮೈದಾನದಲ್ಲಿ ನಡೆದ ಮಹತ್ವದ ಕಾರ್ಯಕ್ರಮದಲ್ಲಿ ದೇಶದ ಎಲ್ಲಾ ನಾಯಕರು ಸಭೆ ಸೇರಿದ ‘ಪ್ರೇರಣ ಸ್ಥಳ’ದಲ್ಲಿ ರಾಜಕೀಯ ವಿರೋಧಿಗಳ ನಡುವೆ ಮಾತುಕತೆ ನಡೆಯಿತು.
ಪ್ರಧಾನಿ ಮೋದಿ ಅವರು ಬರುವಾಗ ಅಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ ಮತ್ತು ಅರ್ಜುನ್ ರಾಮ್ ಮೇಘವಾಲ್ ಜೊತೆಗೆ ರಾಹುಲ್ ಗಾಂಧಿ ನಿಂತಿದ್ದರು. ಎಲ್ಲರಿಗೂ ನಮಸ್ಕರಿಸುತ್ತಾ ಸಾಗಿದ ಪ್ರಧಾನಿ ಮೋದಿ ಅವರು ನಂತರ ರಾಹುಲ್ ಅವರತ್ತ ಮರಳಿದರು. ಆತ್ಮೀಯವಾಗಿ ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿದರು.
ಮೋದಿ-ಗಾಂಧಿ ವಿನಿಮಯದ ತುಣುಕುಗಳು ಆನ್ಲೈನ್ ಚರ್ಚೆಗೆ ಕಾರಣವಾಗಿದೆ. ಅನೇಕ ಬಳಕೆದಾರರು ಇದನ್ನು ಭಾರತೀಯ ಪ್ರಜಾಪ್ರಭುತ್ವದ ಆರೋಗ್ಯಕರ ಸಂಕೇತವೆಂದು ನೋಡುತ್ತಿದ್ದಾರೆ. “ನಮ್ಮ ಪ್ರಧಾನ ಮಂತ್ರಿಯವರು ವಿರೋಧ ಪಕ್ಷದ ನಾಯಕರೊಂದಿಗೆ ಗಂಭೀರ ಸಂಭಾಷಣೆ ನಡೆಸುತ್ತಿರುವುದನ್ನು ನೋಡಿ ಸಂತೋಷವಾಯಿತು” ಎಂದು ಎಕ್ಸ್ ನಲ್ಲಿ ಒಬ್ಬ ಬಳಕೆದಾರರು ಈ ಕ್ಷಣದ ಸಾಂಕೇತಿಕ ಮಹತ್ವವನ್ನು ಎತ್ತಿ ತೋರಿಸಿದರು.




