ವಿಟ್ಲ: ಶಿಕ್ಷಕರ ಜೊತೆ ಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಪ್ಪ ಜಯಪುರದಲ್ಲಿ ವ್ಯಾಸಂಗ ಮಾಡುತ್ತಿದ್ದ ಮೃತ ವಿದ್ಯಾರ್ಥಿ ವಿಟ್ಲದ ಬಾಲಕನಾಗಿದ್ದಾನೆ.

ಜಯಪುರದ ಗುರುಕುಲ ಮಾದರಿಯ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅನಿಕೇತ್ (14) ಮೃತಪಟ್ಟ ದುರ್ದೈವಿ. ರವಿವಾರ (ಏ.12) ಮಧ್ಯಾಹ್ನ ಶಿಕ್ಷಕರೊಂದಿಗೆ ಈಜುಕೊಳಕ್ಕೆ ಈಜಲು ತೆರಳಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಈಜಾಡುತ್ತಿದ್ದ ವೇಳೆ ಅನಿಕೇತ್ ನೀರಿನಲ್ಲಿ ಮುಳುಗಿ ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಆತನನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ತಿಳಿದುಬಂದಿದೆ.
ಮೃತ ಅನಿಕೇತ್ ವಿಟ್ಲದ ಕಾಶಿಮಠ ನಿವಾಸಿ ಗೋವರ್ಧನ್ ನಾಯಕ್ ಅವರ ಪುತ್ರ. ಗೋವರ್ಧನ್ ನಾಯಕ್ ಅವರು ಜೀವವಿಮಾ ಪ್ರತಿನಿಧಿಯಾಗಿದ್ದು, ವಿಟ್ಲ ಹಳೆ ಬಸ್ಸು ನಿಲ್ದಾಣದ ಬಳಿ ಜೀವವಿಮಾ ನಿಗಮದ ಕಚೇರಿಯನ್ನು ಹೊಂದಿದ್ದಾರೆ. ಹಿಂದೂ ಸಂಘಟನೆಗಳು ಸೇರಿದಂತೆ ಹಲವಾರು ಧಾರ್ಮಿಕ ಹಾಗೂ ಸಮಾಜಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮಗನ ಅಕಾಲಿಕ ಮರಣದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತ ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆ ಈಗಾಗಲೇ ನಡೆಸಲಾಗಿದೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




