ಚಾರ್ಮಾಡಿ ಘಾಟ್ ನಲ್ಲಿ ನಿಯಂತ್ರಣ ತಪ್ಪಿ ಪಿಕಪ್ ಪಲ್ಟಿ..! 25ಕ್ಕೂ ಅಧಿಕ ಮಂದಿಗೆ ಗಾಯ

Share with

ಬೆಳ್ತಂಗಡಿ: ಚಾರ್ಮಾಡಿ ಘಾಟಿ ರಸ್ತೆಯ ಆರನೇ ತಿರುವಿನಲ್ಲಿ ಮಂಗಳವಾರ ತಡರಾತ್ರಿ ಭೀಕರ ಅಪಘಾತವೊಂದು ಸಂಭವಿಸಿದೆ. ಸುಮಾರು 25ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.

ವಾಹನದಲ್ಲಿದ್ದವರು ಆಂಧ್ರಪ್ರದೇಶ ಹಾಗೂ ಬಳ್ಳಾರಿ ಮೂಲದವರು ಎಂದು ತಿಳಿದುಬಂದಿದೆ. ಕೆಲಸದ ನಿಮಿತ್ತ ಪ್ರಯಾಣಿಸುತ್ತಿದ್ದ ಇವರು ಘಾಟಿಯ ತಿರುವಿನಲ್ಲಿ ಸಂಚರಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ಹತ್ತಕ್ಕೂ ಹೆಚ್ಚು ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಉಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಕ್ಷಣೆಗೆ ಧಾವಿಸಿದ ಸ್ಥಳೀಯರು

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ವಾಹನ ಸವಾರರು ತಕ್ಷಣ ರಕ್ಷಣಾ ಕಾರ್ಯಕ್ಕೆ ಮುಂದಾದರು. ಚಾರ್ಮಾಡಿ ಹಸನಬ್ಬ ಅವರ ತಂಡ, ರಾಜ್ಯೋತ್ಸವ ಸೇವಾ ಅಂಬುಲೆನ್ಸ್, ಕಕ್ಕಿಂಜೆಯ ಎಸ್‌ಕೆಎಸ್‌ಎಸ್‌ಎಫ್ ಅಂಬುಲೆನ್ಸ್ ಹಾಗೂ ಸ್ಥಳೀಯ ರಿಕ್ಷಾ ಮತ್ತು ಖಾಸಗಿ ಕಾರುಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಎಲ್ಲಾ ಗಾಯಾಳುಗಳನ್ನು ಮೊದಲು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತಲೆ ಮತ್ತು ಕಾಲುಗಳಿಗೆ ತೀವ್ರ ಪೆಟ್ಟು ಬಿದ್ದಿದ್ದ ಹತ್ತು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದರಿಂದ, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.


Share with

Leave a Reply

Your email address will not be published. Required fields are marked *