ಮಂಗಳೂರು: ಕರಾವಳಿ ಭಾಗದ ಕೆಲವು ಕಡೆಗಳಲ್ಲಿ ರವಿವಾರ ಸಾಧಾರಣ ಮಳೆಯಾಗಿದೆ. ಮುಂಗಾರು ಮಳೆ ಬಿರುಸು ಪಡೆಯುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆಯು ಜೂ. 8ರಿಂದ 10ರವರೆಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ “ರೆಡ್ ಅಲರ್ಟ್’ ಘೋಷಣೆ ಮಾಡಿದೆ.

ಮೂರು ದಿನಗಳ ಕಾಲ ಗುಡುಗು, ಗಾಳಿ ಸಹಿತ 204.5 ಮಿ. ಮೀ.ಗೂ ಅಧಿಕ ಮಳೆ ಸುರಿಯುವ ಸಾಧ್ಯತೆ ಇದೆ. ಅರಬ್ಬಿ ಸಮುದ್ರದಲ್ಲಿ ಗಂಟೆಗೆ 60 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಜೂ. 10ರ ವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸಾಧಾರಣ ಮಳೆ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಮೂಡುಬಿದಿರೆ, ಬಂಟ್ವಾಳ, ಬೆಳ್ತಂಗಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರವಿವಾರ ಸಾಧಾರಣ ಮಳೆಯಾಗಿದೆ. ಮಂಗಳೂರಿನಲ್ಲಿ ಬೆಳಗ್ಗೆ ಮಳೆ ಸುರಿದಿದೆ. ಬಳಿಕ ಬಿಟ್ಟು ಬಿಟ್ಟು ಮಳೆಯಾಗಿದ್ದು, ಮೋಡದಿಂದ ಕೂಡಿದ ವಾತಾವರಣ ಇತ್ತು. ಮಂಗಳೂರಿನಲ್ಲಿ 28.9 ಡಿ. ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 2.1 ಡಿ. ಸೆ. ಇಳಿಕೆ ಮತ್ತು 23.5 ಡಿ. ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.3 ಡಿ. ಸೆ. ಉಷ್ಣಾಂಶ ಇಳಿಕೆ ಕಂಡಿತ್ತು.




