ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಸ್ತುತ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ವಿಜಯನ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ. ಸಿಎಂಆರ್‌ಎಲ್-ಎಕ್ಸಾಲಾಜಿಕ್ ಹಣಕಾಸು ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ, ಶುಕ್ರವಾರ ಕೊಚ್ಚಿಯಲ್ಲಿರುವ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ವೀಣಾ ವಿಜಯನ್ ಅವರಿಗೆ ಸೂಚಿಸಲಾಗಿದೆ. ವೀಣಾ ಹಾಗೂ ಕೊಚ್ಚಿನ್ ಮಿನರಲ್ಸ್ ಅಂಡ್ ರೂಟೈಲ್ ಲಿಮಿಟೆಡ್ (CMRL) ಕಂಪನಿಯ ಅಧಿಕಾರಿಗಳು ಸೇರಿದಂತೆ ಒಟ್ಟು ಒಂಬತ್ತು ಜನರಿಗೆ ಸಮನ್ಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ವೀಣಾ ಮಾಲೀಕತ್ವದ ‘ಎಕ್ಸಾಲಾಜಿಕ್’ ಐಟಿ ಸಂಸ್ಥೆ ಮತ್ತು ಖನಿಜ ಕಂಪನಿಯಾದ ಸಿಎಂಆರ್‌ಎಲ್ ನಡುವೆ ನಡೆದಿದೆ ಎನ್ನಲಾದ ಅಕ್ರಮ ಹಣಕಾಸು ವಹಿವಾಟುಗಳ ಕುರಿತು ಈ ತನಿಖೆ ನಡೆಯುತ್ತಿದೆ.
ಇತ್ತೀಚೆಗಷ್ಟೇ ಇಡಿ ಅಧಿಕಾರಿಗಳು ವೀಣಾ ವಿಜಯನ್, ಎಕ್ಸಾಲಾಜಿಕ್ ಸಂಸ್ಥೆ ಹಾಗೂ ಈ ಪ್ರಕರಣಕ್ಕೆ ನಂಟಿರುವ ಇತರರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಇದರ ಬೆನ್ನಲ್ಲೇ ಈಗ ಸಮನ್ಸ್ ಜಾರಿ ಮಾಡಲಾಗಿದ್ದು, ದಾಳಿಯ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾದ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಅಧಿಕಾರಿಗಳು ಇವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.




