ನವದೆಹಲಿ, ಜೂನ್ 10: ಅತಿ ದೀರ್ಘಾವಧಿಗೆ ಪ್ರಧಾನಿಯಾಗಿ ಅಧಿಕಾರ ನಡೆಸಿದ ಪ್ರಧಾನಮಂತ್ರಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನರೇಂದ್ರ ಮೋದಿ (PM Narendra Modi) ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಸಂದರ್ಭವನ್ನು ಆಚರಿಸಲು ದೆಹಲಿಯ ಭಾರತ್ ಮಂಟಪದಲ್ಲಿ ಎನ್ಡಿಎ ನಾಯಕರ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ಎನ್ಡಿಎ ಮೈತ್ರಿಕೂಟದ ಎಲ್ಲಾ ನಾಯಕರಲ್ಲದೆ, ಎನ್‌ಡಿಎ ಆಡಳಿತವಿರುವ ಎಲ್ಲಾ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಕೂಡ ಉಪಸ್ಥಿತರಿದ್ದರು. ಈ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಾನು ಮುಂದೊಂದು ದಿನ ಈ ದಾಖಲೆ ನಿರ್ಮಿಸುತ್ತೇನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. 12 ವರ್ಷ ಭಾರತಮಾತೆಯ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ದೇವರು ನನಗೆ ಕಲ್ಪಿಸಿಕೊಟ್ಟ ಅವಕಾಶ ಎಂದಿದ್ದಾರೆ.

ಎನ್‌ಡಿಎ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಜನತೆ ಈಗ ರಾಜಕೀಯ ಸ್ಥಿರತೆಯ ಪ್ರಾಮುಖ್ಯತೆಯನ್ನು ಮತ್ತು ಸ್ಥಿರ ಸರ್ಕಾರದ ನಿರ್ಣಾಯಕ ನಿರ್ಧಾರಗಳ ಮಹತ್ವವನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದರು. ‘ವಿಕಸಿತ ಭಾರತ’ದ ಕನಸು ಯಾವುದೇ ಒಬ್ಬ ವ್ಯಕ್ತಿ ಅಥವಾ ಪಕ್ಷಕ್ಕೆ ಸೇರಿದ್ದಲ್ಲ, ಬದಲಿಗೆ ಅದು ದೇಶದ ಪ್ರತಿಯೊಬ್ಬ ನಾಗರಿಕನ ಸಂಕಲ್ಪವಾಗಿದೆ. ನನಗೆ ಜನರೇ ಜನಾರ್ದನ” ಎಂದರು.
“ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಸ್ಥಿರತೆಯ ಪ್ರಾಮುಖ್ಯತೆಯನ್ನು ದೇಶದ ಜನತೆ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಅವರ ಪ್ರಬುದ್ಧತೆಯಿಂದಾಗಿಯೇ ನನಗೆ ಇಷ್ಟು ಸುದೀರ್ಘ ಕಾಲ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಧಾನಿ ಮೋದಿ ಅವರು ಬುಧವಾರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮುರಿದರು. 1952ರ ಸಾರ್ವತ್ರಿಕ ಚುನಾವಣೆಯ ನಂತರ ಚುನಾಯಿತ ಪ್ರಧಾನಿಯಾಗಿ ನೆಹರು ಅವರು ಹೊಂದಿದ್ದ 4,398 ದಿನಗಳ ನಿರಂತರ ಅಧಿಕಾರಾವಧಿಯ ದಾಖಲೆಯನ್ನು ಮೋದಿ ಹಿಂದಿಕ್ಕಿದ್ದಾರೆ. ನೆಹರು ಅವರ 1947ರಿಂದ 1952ರವರೆಗಿನ ಅವಧಿಯು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿದ್ದ ಅವಧಿಯಾಗಿತ್ತು. ಏಕೆಂದರೆ 1952ರವರೆಗೆ ದೇಶದಲ್ಲಿ ಚುನಾವಣೆಗಳು ನಡೆದಿರಲಿಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಒಟ್ಟು 14 ವರ್ಷಗಳಿಗಿಂತ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆಯಾದರೂ ಅವರ ಅಧಿಕಾರಾವಧಿಯು ನಿರಂತರವಾಗಿರಲಿಲ್ಲ. ಇದೀಗ ಸಚಿವ ಸಂಪುಟದಲ್ಲಿ ಸತತ 4,399 ದಿನಗಳನ್ನು ಪೂರೈಸುವ ಮೂಲಕ ಮೋದಿ ಭಾರತದ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಸತತವಾಗಿ ಚುನಾಯಿತರಾದ ಪ್ರಧಾನ ಮಂತ್ರಿಯಾಗಿದ್ದಾರೆ.




