9ನೇ ತರಗತಿ ಮಕ್ಕಳಿಗೆ 2 ವಿದೇಶಿ ಭಾಷೆ ಕಲಿಯುವ ಅನುಮತಿ: ಸಿಬಿಎಸ್ಇ

ನವದೆಹಲಿ: ದೇಶದಲ್ಲಿ ತ್ರಿಭಾಷಾ ಸೂತ್ರ ಜಾರಿ ಕುರಿತು ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ(ಸಿಬಿಎಸ್ಇ) ಸೋಮವಾರ ಹೊಸ ಮಾರ್ಗಸೂಚಿ ಹೊರಡಿಸಿದ್ದು, ಪ್ರಸಕ್ತ ವರ್ಷ 10ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ತ್ರಿಭಾಷಾ ಕಲಿಕೆಯಿಂದ ವಿನಾಯ್ತಿ ನೀಡಿದೆ.
ಜೊತೆಗೆ, ಈ ವರ್ಷ 9ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ(2026-27 ಶೈಕ್ಷಣಿಕ ವರ್ಷ) ಒಂದು ಬಾರಿಗೆ ಮಾತ್ರ ಅನ್ವಯವಾಗುವಂತೆ ನಿಯಮದಲ್ಲಿ ಸ್ವಲ್ಪಮಟ್ಟಿಗೆ ಸಡಿಲಿಕೆ ಮಾಡಲಾಗಿದೆ. ಈ ವಿದ್ಯಾರ್ಥಿಗಳು ಮೂರು ಭಾಷೆಯನ್ನು ಕಲಿಯುವುದು ಕಡ್ಡಾಯವಾಗಿದ್ದರೂ, ಅವರಿಗೆ 2 ವಿದೇಶಿ ಭಾಷೆ ಮತ್ತು ಒಂದು ಭಾರತೀಯ ಭಾಷೆಯನ್ನು ಕಲಿಯಲು ಅವಕಾಶ ಕಲ್ಪಿಸಲಾಗಿದೆ.
ಜುಲೈ 1ರಿಂದ ಜಾರಿಯಾಗುವಂತೆ 9ನೇ ತರಗತಿ ವಿದ್ಯಾರ್ಥಿಗಳು ಕನಿಷ್ಠ 2 ಭಾರತೀಯ ಭಾಷೆ ಸೇರಿದಂತೆ 3 ಭಾಷೆ ಕಲಿಯುವುದನ್ನು ಕಡ್ಡಾಯಗೊಳಿಸಿ ಈ ಹಿಂದೆಯೇ ಸಿಬಿಎಸ್ಇ ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಹಲವು ವಿದ್ಯಾರ್ಥಿಗಳು ಹಾಗೂ ಪೋಷಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರ ಬೆನ್ನಲ್ಲೇ ಹೊಸ ಮಾರ್ಗಸೂಚಿ ಹೊರಬಿದ್ದಿದೆ.
ಬೋರ್ಡ್ ಪರೀಕ್ಷೆ ಇಲ್ಲ: ಇದೇ ವೇಳೆ, ಪ್ರಸ್ತುತ 7 ರಿಂದ 9ನೇ ತರಗತಿಯಲ್ಲಿರುವ ವಿದ್ಯಾರ್ಥಿಗಳು ತೇರ್ಗಡೆಗೊಂಡು ಮುಂದೆ 10ನೇ ತರಗತಿಗೆ ಬಂದಾಗ, ಅವರು 3ನೇ ಭಾಷೆಯಲ್ಲಿ ಬೋರ್ಡ್ ಪರೀಕ್ಷೆ ಬರೆಯುವ ಅಗತ್ಯವಿರುವುದಿಲ್ಲ ಎಂದು ಸಿಬಿಎಸ್ಇ ನಿರ್ದೇಶಕಿ (ಅಕಾಡೆಮಿಕ್ಸ್) ಪ್ರಜ್ಞಾ ಎಂ. ಸಿಂಗ್ ಸ್ಪಷ್ಟಪಡಿಸಿದ್ದಾರೆ.




