ಉಚಿತ ಹೆಸರಿನಲ್ಲಿ ವಂಚಕ ವೈ-ಫೈ ಜಾಲ!

ಮಂಗಳೂರು: ಉಚಿತವಾಗಿ ಸಿಗುತ್ತದೆ ಎಂದು ವೈ-ಫೈ ಬಳಕೆ ಮಾಡುವವರ ಸಂಖ್ಯೆಗೇನು ಕಡಿಮೆ ಇಲ್ಲ. ಆದರೆ ಇದನ್ನೇ ಬಳಸಿ ವಂಚಿಸುವ ಜಾಲಗಳು ಕೂಡಾ ಸಕ್ರಿಯವಾಗಿದೆ. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗುವ ಉಚಿತ ವೈ-ಫೈ ಸೇವೆಗಳನ್ನು ಬಳಸುವ ಮುನ್ನ ಸಾರ್ವಜನಿಕರು ಎಚ್ಚರ ವಹಿಸಬೇಕಾಗಿದೆ. ರೈಲು ನಿಲ್ದಾಣ, ಬಸ್ ನಿಲ್ದಾಣ, ಮಾಲ್, ಹೋಟೆಲ್, ಕೆಫೆ, ವಿಮಾನ ನಿಲ್ದಾಣ ಸೇರಿದಂತೆ ವಿವಿಧೆಡೆ ವೈ-ಫೈಗಳನ್ನು ಸಾರ್ವ ಜನಿಕರಿಗೆ ಉಚಿತವಾಗಿ ನೀಡಲಾಗುತ್ತದೆ. ಸೈಬರ್ಅಪರಾಧಿಗಳು ಇದೇ ಅವಕಾಶ ಬಳಸಿಕೊಂಡು ನಕಲಿ ವೈ-ಫೈ ಜಾಲಗಳನ್ನು ಸೃಷ್ಟಿಸಿ ಮೊಬೈಲ್ ಬಳಕೆದಾರರ ವೈಯಕ್ತಿಕ ಮಾಹಿತಿ ಕದಿಯುವ ಸಾಧ್ಯತೆಯೂ ಇವೆ ಎನ್ನುತ್ತಾರೆ ಪೊಲೀಸರು.
ವಂಚಕರು ಬಳಸುವ ತಂತ್ರಗಳು
- ನಕಲಿ ಹೆಸರು ಬಳಕೆ (ಫ್ರೀ ಏರ್ಪೋರ್ಟ್ ವೈಫೈ, ಮಾಲ್ ವೈಫೈ,
- ನೆಟ್ ಹೆಚ್ಚಿನ ವೇಗದ ಆಮಿಷ
- ಮೊದಲು ಮೊಬೈಲ್ ಸಂಖ್ಯೆ, ಇಮೇಲ್ ಕೇಳುವ ಜಾಲ
- ನಕಲಿ ಲಾಗಿನ್ ಪುಟಗಳ ಮೂಲಕ ಪಾಸ್ವರ್ಡ್ ಕಳವು
ತಪ್ಪಿಸಲು ಏನು ಮಾಡಬಹುದು?
- ಮೊಬೈಲ್ನಲ್ಲಿರುವ ವೈಫೈ ಆಟೋ ಕನೆಕ್ಟ್ ಆಪ್ಷನ್ ಆಫ್ ಮಾಡುವುದು
- ವೈಫೈ ಬಗ್ಗೆ ಮಾಹಿತಿ ಪಡೆದು ಬಳಿಕ ಕನೆಕ್ಟ್ ಮಾಡುವುದು.
- ವೈಫೈ ಕನೆಕ್ಟಿಗೆ ಪಾಪ್ಅಪ್ ಬಂದರೆ ತಿರಸ್ಕರಿಸು ವುದು.
- ವಿಪಿಎನ್ ನೆಟ್ವರ್ಕ್ ಬಳಸುವುದು
- ಅನುಮಾನಾಸ್ಪದ ಲಿಂಕ್ಗಳಲ್ಲಿ ಲಾಗಿನ್ ಮಾಡಬೇಡಿ
ಅಸಲಿ ಜಾಲದಂತೆ ನಕಲಿ
ಸೈಬರ್ವಂಚಕರು ಸಾರ್ವಜನಿಕ ಸ್ಥಳಗಳಲ್ಲಿ ಇರುವ ನೈಜ ವೈ – ಫೈ ಹೆಸರಿನಂತೆಯೇ ಮತ್ತೂಂದು ನಕಲಿ ಜಾಲ ಸೃಷ್ಟಿಸುತ್ತಾರೆ. ಉದಾಹರಣೆಗೆ, ಹೋಟೆಲ್ ಅಥವಾ ನಿಲ್ದಾಣದ ಅಧಿಕೃತ ವೈ-ಫೈ ಹೆಸರಿನಂತೆ ಕಾಣುವ ಜಾಲಕ್ಕೆ ಬಳಕೆದಾರ ಸಂಪರ್ಕಿಸಿದಾಗ, ಅವರ ಮೊಬೈಲ್ನಲ್ಲಿರುವ ಮಾಹಿತಿ ವಂಚಕರಿಗೆ ತಲುಪುವ ಸಾಧ್ಯತೆ ಇರುತ್ತದೆ. ಒಂದು ಬಾರಿ ಮೊಬೈಲ್ ನಕಲಿ ಜಾಲಕ್ಕೆ ಸಂಪರ್ಕವಾದರೆ, ಬಳಕೆದಾರನಿಗೆ ಅರಿವಿಲ್ಲದೆಯೇ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇದೆ. ಉಚಿತ ಇಂಟರ್ನೆಟ್ಗಿಂತ ವೈಯಕ್ತಿಕ ಮಾಹಿತಿಯ ಸುರಕ್ಷತೆ ಮುಖ್ಯ ಎಂಬ ಅರಿವು ಸಾರ್ವಜನಿಕರಲ್ಲಿ ಮೂಡಬೇಕಾಗಿದೆ.
ಬಳಕೆಗೆ ಮುನ್ನ ಪರಿಶೀಲಿಸಿ
ಫ್ರೀ ವೈಫೈ ಜಾಲದಲ್ಲಿ ಯುವ ಜನತೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತದೆ. ಆದ್ದರಿಂದ ವೈ ಫೈ ಉಪಯೋಗಿಸುವ ಮೊದಲು ಪರಿಶೀಲಿಸಿರುವುದು ಉತ್ತಮ. ಮುಂಜಾಗರೂಕತೆ ವಹಿಸುವುದರಿಂದ ಮಾತ್ರ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಬಹುದು. – ಸುಧೀರ್ಕುಮಾರ ರೆಡ್ಡಿ, ಕಮಿಶನರ್




