ಬಂಟ್ವಾಳ: ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮೋಂತಿಮಾರು ಪಡ್ಡು ಎಂಬಲ್ಲಿ ಬಸ್ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ಕಾಲೇಜಿಗೆ ತೆರಳಲು ಬಸ್ಸಿಗೆ ಕಾಯುತ್ತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಯುವಕನೊಬ್ಬ ಮಚ್ಚಿನಿಂದ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿ ಪರಾರಿಯಾಗಿದ್ದಾನೆ.

ಸ್ಥಳೀಯ ಮೋಂತಿಮಾರು ಪಡ್ಡು ನಿವಾಸಿ ಜವ್ವಾರ್ (28) ಚೂರಿ ಇರಿದ ಆರೋಪಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿ ಬಸ್ ನಿಲ್ದಾಣದ ಸಮೀಪ ದಿನಸಿ ಅಂಗಡಿ ನಡೆಸುತ್ತಿದ್ದಾನೆ ಎನ್ನಲಾಗಿದೆ.
ವಿದ್ಯಾರ್ಥಿನಿ ಬಸ್‌ಗಾಗಿ ಕಾಯುತ್ತಿದ್ದ ವೇಳೆ ಆರೋಪಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಇತರ ಪ್ರಯಾಣಿಕರು ಘಟನೆ ಕಂಡು ಜೋರಾಗಿ ಕಿರುಚಿದ ಪರಿಣಾಮ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಆರೋಪಿ ಪೊಲೀಸರಿಗೆ ಶರಣು: ಸೋಮವಾರ ಬೆಳಿಗ್ಗೆ ಸುಮಾರು 8.45ರ ವೇಳೆಗೆ ಅಪ್ರಾಪ್ತ ವಯಸ್ಸಿನ (17 ವರ್ಷ ) ವಿದ್ಯಾರ್ಥಿನಿಯ ತಲೆ ಮತ್ತು ಕೈಗೆ ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪಿ ಬಂಟ್ವಾಳ ಮಂಚಿ ನಿವಾಸಿ ಮೊಹಮ್ಮದ್ ಜವ್ವಾರ್ (28) ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಹಲ್ಲೆಗೊಳಗಾದ ವಿದ್ಯಾರ್ಥಿನಿಯು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿಯ ವಿಚಾರಣೆ ನಡೆಸಿ ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.




