ಮಂಗಳೂರು: ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ಚಿನ್ನಾಭರಣಗಳನ್ನು ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜೂ.29ರಂದು ನಸುಕಿನ 2:45 ಗಂಟೆ ವೇಳೆಗೆ ಮಂಗಳೂರಿನ ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ನಡೆದಿತ್ತು.

ಪ್ರಕರಣದಲ್ಲಿ ಭಾಗಿಯಾಗಿದ್ದ ಒಟ್ಟು 16 ಆರೋಪಿಗಳ ಪೈಕಿ ಸದ್ಯ ಮೂವರನ್ನು ಬಂಧಿಸಲಾಗಿದೆ. ಬಂಧಿತರನ್ನು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪರಿಯಾಡ್ ಮೂಲದ ನಿಮಿಲ್ ಆರ್.ಕೆ (37 ವ), ಮಡಿಕೇರಿಯ ಇರ್ಷಾದ್ (40 ವ), ಮಡಿಕೇರಿಯ ಮುಸ್ತಾಫ (49 ವ) ಎಂದು ಗುರುತಿಸಲಾಗಿದೆ.
ಜೂ.29ರಂದು ಬೆಳಗಿನ ಜಾವ ವಿಕಾಸ್ ಸುಬ್ಬರಾವ್ ಧನವಡೆ (44 ವರ್ಷ) ಮಹಾರಾಷ್ಟ್ರದಿಂದ ಕೇರಳದ ಪಯ್ಯನ್ನೂರಿಗೆ ತಮ್ಮ ಕುಟುಂಬದೊಂದಿಗೆ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ-66 ಮೂಲಕ ಬರುತ್ತಿದ್ದ ವೇಳೆ, ಮಂಗಳೂರಿನ ಬೈಕಂಪಾಡಿ ಸಮೀಪ ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ 6-7 ಜನ ಮುಸುಕುಧಾರಿಗಳು ಕಾರನ್ನು ಅಡ್ಡಗಟ್ಟಿದ್ದರು. ವಿಕಾಸ್ ಅವರಿಗೆ ತಲವಾರು ತೋರಿಸಿ ಬೆದರಿಸಿ ಮೇಲೆ ಹಲ್ಲೆ ನಡೆಸಿ, ಪತ್ನಿ ಹಾಗೂ ಮಗನನ್ನು ಬಲವಂತವಾಗಿ ಅಪಹರಿಸಿ ಕೆಲ ಕಿಲೋಮೀಟರ್ ದೂರದಲ್ಲಿ ಬಿಟ್ಟು ಹೋಗಿದ್ದರು.
ಈ ವೇಳೆ ಕಾರಿನೊಳಗೆ ಬ್ಯಾಗಿನಲ್ಲಿರಿಸಿದ್ದ ಸುಮಾರು 180 ಗ್ರಾಂ ಚಿನ್ನಾಭರಣಗಳು (ಅಂದಾಜು ಮೌಲ್ಯ ರೂ.20 ಲಕ್ಷ), ಎರಡು ಮೊಬೈಲ್ ಫೋನ್‌ಗಳು (ರೂ.10,000) ಹಾಗೂ ಕಾರು (ಅಂದಾಜು ರೂ.3 ಲಕ್ಷ) ಸೇರಿದಂತೆ ಒಟ್ಟು 23,10,000 ಮೌಲ್ಯದ ದರೋಡೆ ಮಾಡಿಕೊಂಡ ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಯುತ್ತಿದ್ದತೆ ಜೂ.30ರಂದು ಬಂಟ್ವಾಳದ ಪಚ್ಚಿನಡ್ಕದಲ್ಲಿ ಮಾರುತಿ ಡಿಝರ್ ಕಾರು ನಂಬರ್ ಪ್ಲೇಟ್ ಇಲ್ಲದೇ ಇರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಪ್ರಕರಣಕ್ಕೆ ಕೇರಳ ಲಿಂಕ್
ಪ್ರಕರಣದಲ್ಲಿ ಭಾಗಿಯಾಗಿದ್ದ ನಿಮಿಲ್ ಆರ್.ಕೆ ಎಂಬಾತನನ್ನು ಜು.2ರಂದು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಚಾಲ ಎಂಬಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿತರಿಗೆ ಕೃತ್ಯ ಎಸಗಲು ಸಹಕರಿಸಿ ಆಶ್ರಯ ನೀಡಿದ ಮಡಿಕೇರಿಯ ಇರ್ಷಾದ್ ಎಂಬಾತನ್ನು ಅದೇ ದಿನ ಪಣಂಬೂರು ಪೊಲೀಸರು ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಸಹಕರಿಸಿ ಪ್ರಮುಖ ಆರೋಪಿಗಳಿಗೆ ಕಾರು ಒದಗಿಸಿಕೊಟ್ಟು ಆಶ್ರಯ ನೀಡಿದ್ದ ಇನ್ನೊರ್ವ ಆರೋಪಿ ಮುಸ್ತಾಫ ಎಂಬಾತನ್ನು ಜು. 2ರ ರಾತ್ರಿ ಮಡಿಕೇರಿ ತಾಲೂಕು ಮೂರ್ನಾಡು ಜಂಕ್ಷನ್ ನಲ್ಲಿರುವ ಲಯನ್ಸ್ ಕ್ಲಬ್ ಬಳಿಯ ಬಸ್ಸು ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.
16ರಲ್ಲಿ ಮೂವರು ವಶಕ್ಕೆ
ಪ್ರಾಥಮಿಕ ವಿಚಾರಣೆಯಿಂದ ಕೃತ್ಯದಲ್ಲಿ ಒಟ್ಟು 14 ಆರೋಪಿರು ನೇರವಾಗಿ ಭಾಗಿಯಾಗಿದ್ದು, ಇಬ್ಬರು ಕೃತ್ಯಕ್ಕೆ ಸಹಕರಿಸಿ ಆರೋಪಿಗಳಿಗೆ ಆಶ್ರಯ ನೀಡಿರುವುದು ಪತ್ತೆಯಾಗಿದೆ. ಪ್ರಕರಣದಲ್ಲಿ ಭಾಗಿಯಾದ ಒಟ್ಟು 16 ಆರೋಪಿಗಳ ಪೈಕಿ ಮೂರು ಆರೋಪಿಗಳನ್ನು ದಸ್ತಗಿರಿ ಮಾಡಿ ಜು.3ರಂದು ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಎಲ್ಲಾ 03 ಆರೋಪಿಗಳನ್ನು ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಸದ್ಯ ಆರೋಪಿಗಳು ದರೋಡೆ ಮಾಡಿಕೊಂಡು ಹೋದ ಮಾರುತಿ ಡಿಝರ್ ಕಾರು ಹಾಗು ಆರೋಪಿತರು ಕೃತ್ಯಕ್ಕೆ ಬಳಸಿದ 04 ಕಾರುಗಳ ಪೈಕಿ 1 ಇನ್ನೋವಾ ಕ್ರಿಸ್ಟಾ ಕಾರನ್ನು ಸ್ವಾಧೀಪಡಿಸಿಕೊಂಡಿದ್ದು, ಆರೋಪಿತರು ಬಳಸಿದ ಉಳಿದ 03 ಕಾರುಗಳು ಮತ್ತು ದರೋಡೆ ಮಾಡಿ ತೆಗೆದುಕೊಂಡು ಹೋದ 180 ಗ್ರಾಂ ಚಿನ್ನಾಭರಣ ಹಾಗೂ 2 ಮೊಬೈಲ್ ಫೋನ್ ಗಳನ್ನು ಪತ್ತೆಗೆ ಬಾಕಿ ಇರುತ್ತದೆ.
ಆರೋಪಿಗಳೆಲ್ಲರೂ ಮಡಿಕೇರಿ ಜಿಲ್ಲೆ ಮತ್ತು ಕೇರಳ ರಾಜ್ಯದವರೆಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣದಲ್ಲಿ ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ




