ಮಂಗಳೂರು, ಜುಲೈ 26: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಸಮಾಜ ಸೇವಕ ಹಾಗೂ ಆಪದ್ಬಾಂಧವ ಎಂದೇ ಗುರುತಿಸಿಕೊಂಡಿದ್ದ ಆ್ಯಂಬುಲೆನ್ಸ್ ಚಾಲಕ ಜಲೀಲ್ ಆಲಿಯಾಸ್ ಜಲೀಲ್ ಬಾಬಾ ಎಂಬಾತನ ಮತ್ತೊಂದು ಕರಾಳ ಮುಖ ಬಯಲಾಗಿದೆ. ಸಮಾಜ ಸೇವೆಯ ನೆಪದಲ್ಲಿ ಈತ ಆ್ಯಂಬುಲೆನ್ಸ್ ಬಳಸಿ ಭಾರೀ ಪ್ರಮಾಣದ ಡ್ರಗ್ಸ್ (drug) ಪೂರೈಕೆ ಮಾಡುತ್ತಿದ್ದ ಸ್ಪೋಟಕ ಸಂಗತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಆಪದ್ಬಾಂಧವನ ಮತ್ತೊಂದು ಮುಖವಾಡ ಬಯಲು
ಜಲೀಲ್ ಅಲಿಯಾಸ್ ಜಲೀಲ್ ಬಾಬಾ ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಜನರಿಗೆ ಈತನ ಮುಖ ಚಿರಪರಿಚಿತ. ಇಡೀ ತಾಲೂಕಿನಲ್ಲಿ ಎಲ್ಲೇ ಅಪಘಾತವಾಗಲೀ, ಯಾವುದೇ ಅನಾಹುತವಾಗಲೀ ಈ ಜಲೀಲ್ ಬಾಬಾ ಆ ಜಾಗಕ್ಕೆ ತನ್ನ ಆ್ಯಂಬುಲೆನ್ಸ್ ಸಮೇತ ಎಂಟ್ರಿ ಕೊಡುತ್ತಿದ್ದ. ಇದೇ ಕಾರಣಕ್ಕೆ ಜನ ಈತನನ್ನ ಆಪದ್ಬಾಂಧವ ಅಂತಾನೇ ಕರೆಯುತ್ತಿದ್ದರು. ಆದರೆ ಸದ್ಯ ಈತನ ಮತ್ತೊಂದು ಮುಖವಾಡ ಬಯಲಾಗಿದೆ. ಸಮಾಜ ಸೇವೆಯ ಹೆಸರಿನಲ್ಲಿ ಈತ ನಡೆಸುತ್ತಿದ್ದ ಭಾರೀ ಡ್ರಗ್ಸ್ ದಂಧೆ ಬಯಲಿಗೆ ಬಂದಿದೆ.
ಸಮಾಜ ಸೇವೆಯ ಹೆಸರಿನಲ್ಲಿ ಆ್ಯಂಬುಲೆನ್ಸ್ ಓಡಿಸುತ್ತಿದ್ದ ಜಲೀಲ್ ಡ್ರಗ್ಸ್ ಪೂರೈಕೆಗೆ ಅದನ್ನೇ ಬಳಸುತ್ತಿದ್ದ ಎಂಬ ಸ್ಫೋಟಕ ಮಾಹಿತಿ ಮಂಗಳೂರು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. 5 ಕೋಟಿ ರೂ ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದ ತನಿಖೆ ವೇಳೆ ಬೆಳ್ತಂಗಡಿಯ ಆ್ಯಂಬುಲೆನ್ಸ್ ಚಾಲಕ ಜಲೀಲ್ ಬಾಬಾನ ಪಾತ್ರ ಪತ್ತೆಯಾಗಿದ್ದು, ಆತ ಸದ್ಯ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾದೆ.
ಜಲೀಲ್ ಬಾಬಾ ಸಿಕ್ಕಿಬಿದ್ದಿದ್ದು ಹೇಗೆ?
ಅಸಲಿಗೆ ಜೂನ್ 25ರಂದು ಮಂಗಳೂರಿನಲ್ಲಿ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬಾತನನ್ನು ಎಂಡಿಎಂಎ ಸಹಿತ ಬಂಧಿಸಲಾಗಿತ್ತು. ಆತನ ವಿಚಾರಣೆ ವೇಳೆ ದೆಹಲಿಯಿಂದ ಡ್ರಗ್ಸ್ ಬರುತ್ತಿರುವ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಜುಲೈ 15ರಂದು ಬಾಗಲಕೋಟೆಯ ಲಾಡ್ಜ್ ಮೇಲೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದರು. ಕಾರ್ಯಾಚರಣೆಯಲ್ಲಿ ಸುಮಾರು 5 ಕೋಟಿ ರೂ ಮೌಲ್ಯದ 5 ಕೆಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಬೆಳ್ತಂಗಡಿ ಮೂಲದ ಮಹಮ್ಮದ್ ಅಲ್ಫಾಜ್ ಹಾಗೂ ಮಹಮ್ಮದ್ ಮುಸ್ತಾಫಾ ಎಂಬುವವರನ್ನು ಬಂಧಿಸಲಾಗಿತ್ತು.





