ಮೊಡಂಕಾಪು ದೇವಸ್ಥಾನದಲ್ಲಿ ಕಳವುಗೈದ ಇಬ್ಬರ ಬಂಧನ

Share with

ಬಂಟ್ವಾಳ: ಬಿಸಿರೋಡ್ ಸಮೀಪದ ಮೊಕಾಪುವಿನ ಶ್ರೀಆದಿಶಕ್ತಿ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಡೆದ ಕಳವು ಹಾಗೂ ಕಳವು ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕುಂಬ್ಳೆ ನಿವಾಸಿ ಸುರೇಶ್ ಹಾಗೂ ಶಾಂತಿಯಂಗಡಿ ನಿವಾಸಿ ಅಬ್ದುಲ್ ರಝಾಕ್ ಬಂಧಿತರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

ಕೆಲ ದಿನಗಳ ಹಿಂದೆ ದೇವಸ್ಥಾನದಲ್ಲಿ ಭಕ್ತರು ಸುಮಾರು ನಾಲ್ಕು ದಶಕಗಳಿಂದ ಸಮರ್ಪಿಸಿದ್ದ ತಾಮ್ರ ಹಾಗೂ ಪಿತ್ತಳದ ಪೂಜಾ ಪರಿಕರಗಳು ಕಳವಾಗಿರುವುದು ಬೆಳಕಿಗೆ ಬಂದಿತ್ತು. ಕಳವಾದ ವಸ್ತುಗಳಲ್ಲಿ ಹಳೆಯ ಕೊಪ್ಪರಿಗೆ, ಆರು ದೀಪಗಳು, ಸುಮಾರು 20 ಗಿಂಡೆಗಳು, ಹರಿವಾಣ ತಟ್ಟೆ, ಭಜನಾ ತಾಳ, ತಾಮ್ರದ ಕೊಡಪಾನ, ತಾಮ್ರದ ಅಕ್ಕಿ ಸೋಸುವ ಪಾತ್ರೆ ಸೇರಿದಂತೆ ಹಲವು ಪೂಜಾ ಸಾಮಗ್ರಿಗಳು ಸೇರಿದ್ದವು.

ಘಟನೆಯ ಸಂದರ್ಭದಲ್ಲಿ ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಮೂವರು ವ್ಯಕ್ತಿಗಳು ಗೋಣಿಯಲ್ಲಿ ಸಾಮಗ್ರಿಗಳನ್ನು ತುಂಬಿಕೊಂಡು ಸಾಗಿಸುತ್ತಿರುವ ದೃಶ್ಯಗಳು ಸೆರೆಯಾಗಿದ್ದವು. ಅಲ್ಲದೆ, ದೇವಸ್ಥಾನ ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕೆಲವರನ್ನು ಸ್ಥಳೀಯರು ಪ್ರಶ್ನಿಸಿದಾಗ, ದೇವಸ್ಥಾನದ ಪರವಾಗಿ ಕೆಲಸಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿತ್ತು. ಬಳಿಕ ದೇವಸ್ಥಾನದ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ವಿಚಾರಿಸಿದಾಗ, ಅಂತಹ ಯಾವುದೇ ಕೆಲಸಕ್ಕೆ ಯಾರನ್ನೂ ನಿಯೋಜಿಸಿಲ್ಲ ಎಂಬುದು ತಿಳಿದುಬಂದಿತ್ತು.

ದೇವಸ್ಥಾನದಲ್ಲಿ ಪರಿಶೀಲನೆ ನಡೆಸಿದಾಗ, ಅನ್ನಪಾತ್ರೆಗಳನ್ನು ಗೋಣಿಯಲ್ಲಿ ತುಂಬಿಸಿಟ್ಟಿರುವುದು ಹಾಗೂ ಗೋದ್ರೆಜ್ ಕಪಾಟುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಶಂಕಿತರನ್ನು ಬಂಟ್ವಾಳ ನಗರ ಪೊಲೀಸ್‌ ಠಾಣೆಗೆ ಒಪ್ಪಿಸಿ ದೂರು ದಾಖಲಿಸಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ ನಗರ ಠಾಣೆ ಪೊಲೀಸರು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಕಳವಾದ ಪೂಜಾ ಸಾಮಗ್ರಿಗಳ ಪತ್ತೆ ಹಾಗೂ ಪ್ರಕರಣದಲ್ಲಿ ಇತರರ ಭಾಗವಹಿಸುವಿಕೆ ಕುರಿತು ತನಿಖೆ ಮುಂದುವರಿದಿದೆ.


Share with

Leave a Reply

Your email address will not be published. Required fields are marked *