₹10, ₹20 ಪಾಲಿಮರ್ ನೋಟುಗಳ ಪ್ರಾಯೋಗಿಕ ಚಲಾವಣೆಗೆ ಕೇಂದ್ರದ ಅನುಮೋದನೆ

Share with

ನವದೆಹಲಿ: ₹10 ಮತ್ತು ₹20 ಮುಖಬೆಲೆಯ ಪಾಲಿಮರ್ (ಪ್ಲಾಸ್ಟಿಕ್) ಕರೆನ್ಸಿ ನೋಟುಗಳನ್ನು ಪ್ರಾಯೋಗಿಕವಾಗಿ ಚಲಾವಣೆಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಈ ಮಾಹಿತಿ ನೀಡಿದ್ದು, ಆರಂಭಿಕ ಹಂತದಲ್ಲಿ ₹10 ಹಾಗೂ ₹20 ಮುಖಬೆಲೆಯ ತಲಾ 100 ಕೋಟಿ ನೋಟುಗಳನ್ನು (ಒಟ್ಟು 200 ಕೋಟಿ) ಕ್ಷೇತ್ರ ಪರೀಕ್ಷೆ (Field Trial)ಗಾಗಿ ಮುದ್ರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾದ ಬಳಿಕ ಮಾತ್ರ ಪಾಲಿಮರ್ ನೋಟುಗಳನ್ನು ದೇಶಾದ್ಯಂತ ನಿಯಮಿತವಾಗಿ ಚಲಾವಣೆಗೆ ತರುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

ಸದ್ಯ ಚಲಾವಣೆಯಲ್ಲಿರುವ ಕಾಗದದ ₹10 ಮತ್ತು ₹20 ನೋಟುಗಳನ್ನು ರದ್ದುಗೊಳಿಸುವ ಅಥವಾ ಅವುಗಳ ಬದಲಿಗೆ ತಕ್ಷಣವೇ ಪಾಲಿಮರ್ ನೋಟುಗಳನ್ನು ಪರಿಚಯಿಸುವ ಯಾವುದೇ ಯೋಜನೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಪ್ರಾಯೋಗಿಕ ಹಂತದಲ್ಲಿ ಪಾಲಿಮರ್ ಹಾಗೂ ಕಾಗದದ ನೋಟುಗಳು ಸಮಾನಾಂತರವಾಗಿ ಚಲಾವಣೆಯಲ್ಲಿರಲಿವೆ.

ಪಾಲಿಮರ್ ನೋಟುಗಳು ಕಾಗದದ ನೋಟುಗಳಿಗಿಂತ ಹೆಚ್ಚು ಬಾಳಿಕೆ ಹೊಂದಿದ್ದು, ತೇವಾಂಶ ಮತ್ತು ಕೊಳೆಯುವಿಕೆಗೆ ಹೆಚ್ಚಿನ ಪ್ರತಿರೋಧ ನೀಡುತ್ತವೆ. ಜೊತೆಗೆ, ನಕಲಿ ನೋಟು ತಯಾರಿಕೆಯನ್ನು ತಡೆಯುವ ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಈ ಪ್ರಯೋಗಕ್ಕೆ ಮಹತ್ವ ನೀಡಲಾಗಿದೆ.


Share with

Leave a Reply

Your email address will not be published. Required fields are marked *