ಸಿಡಿಲು ಬಡಿದು 24 ವರ್ಷದ ಯುವ ಫುಟ್ಬಾಲ್ ಆಟಗಾರ ಸಾವನ್ನಪ್ಪಿರುವ ದಾರುಣ ಘಟನೆ ಭಾರತದ ನೆರೆಯ ರಾಷ್ಟ್ರ ಥೈಲ್ಯಾಂಡ್ನಲ್ಲಿ ನಡೆದಿದೆ. ಈ ಅವಘಡದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನಿಜಕ್ಕೂ ಹೃದಯವಿದ್ರಾವಕವಾಗಿದೆ. ದಕ್ಷಿಣ ಥೈಲ್ಯಾಂಡ್ನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಪಂದ್ಯದ ಸಂದರ್ಭದಲ್ಲಿ ಸಿಡಿಲು ಬಡಿದ ಪರಿಣಾಮವಾಗಿ ಯುವ ಫುಟ್ಬಾಲ್ ಆಟಗಾರ ಸೋಫ್ವಾನ್ ಅವೆ ಸಾವನ್ನಪ್ಪಿದ್ದಾರೆ. ಹಾಗೆಯೇ ಈ ಘಟನೆಯಲ್ಲಿ ಸುಮಾರು ಒಂದು ಡಜನ್ ಇತರ ಆಟಗಾರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸ್ಥಳದಲ್ಲೇ ಸಾವು
ವೈರಲ್ ಆಗಿರುವ ವಿಡಿಯೋದಲ್ಲಿರುವಂತೆ ಭಾರೀ ಮಳೆಯ ನಡುವೆಯೂ ಫುಟ್ಬಾಲ್ ಪಂದ್ಯ ನಡೆಯುತ್ತಿತ್ತು. ಇದೇ ವೇಳೆ ಇದ್ದಕ್ಕಿದ್ದಂತೆ ಸಿಡಿಲು ಬಡಿದಿದ್ದರಿಂದ ಮೈದಾನದಲ್ಲಿದ್ದ ಸೋಫ್ವಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೈದಾನದಲ್ಲಿದ್ದ ಉಳಿದ ಆಟಗಾರರು ಸಿಡಿಲನ ರಬಸಕ್ಕೆ ನೆಲಕ್ಕುರುಳಿದ್ದಾರೆ. ಕೂಡಲೇ ಅಲ್ಲಿ ನೆರೆದಿದ್ದವರು ಆಟಗಾರರ ಸಹಾಯಕ್ಕೆ ಧಾವಿಸಿದ್ದಾರೆ. ಈ ಅವಘಡದ ವಿಡಿಯೋ ವೈರಲ್ ಆದ ನಂತರ, ಭಾರೀ ಮಳೆಯ ನಡುವೆಯೂ ಆಟವನ್ನು ಮುಂದುವರೆಸಿರುವುದರ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಹತ್ತಿರದ ಆಸ್ಪತ್ರೆಗೆ ರವಾನಿಸಲಾಯಿತು
ಮಳೆ ಬಂದ ಕೂಡಲೇ ಪಂದ್ಯವನ್ನು ನಿಲ್ಲಿಸಿದ್ದರೆ, ಈ ಘಟನೆ ನಡೆಯುತ್ತಿರಲಿಲ್ಲ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಅಲ್ಲದೆ ಈ ಪಂದ್ಯಾವಳಿಯ ಆಯೋಜಕರ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಮಲೇಷ್ಯಾದ ಸುದ್ದಿ ಸಂಸ್ಥೆ ಬರ್ನಾಮ ಪ್ರಕಾರ, ಅವಘಡದ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಮುಖ್ಯಸ್ಥ ಥುನ್ ಸಿರಿಖುಂಟ್, ‘ತುರ್ತು ವೈದ್ಯಕೀಯ ತಂಡವು ಸೋಫ್ವಾನ್ ಅವರನ್ನು ಉಳಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿತು. ಆದರೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರ ಕಾರಣದಿಂದಾಗಿ ಸೋಫ್ವಾನ್ ಸಾವನ್ನಪ್ಪಿದ್ದಾರೆ. ಸಿಡಿಲು ಬಡಿದ ಕೂಡಲೇ ಪ್ರೇಕ್ಷಕರು ಮತ್ತು ಅಲ್ಲಿದ್ದ ಇತರ ಜನರು ಸಫ್ವಾನ್ ಅವರನ್ನು ರಕ್ಷಿಸಲು ಭಯಭೀತರಾಗಿ ಮೈದಾನಕ್ಕೆ ಧಾವಿಸಿದರು. ತಕ್ಷಣವೇ ವೈದ್ಯಕೀಯ ತಂಡ ಕೂಡ ಆಗಮಿಸಿ ಸಫ್ವಾನ್ ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಯಿತು. ವೈದ್ಯರ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.





