ಪೈಲಟ್ನ ಮಾದರಿಯಲ್ಲಿ ಗಾಂಜಾ ಪತ್ತೆ; ತನಿಖೆ ಮುಂದುವರಿಕೆ
ನವದೆಹಲಿ: ಫುಕೆಟ್ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಹಾರಾಟದ ವೇಳೆ ದಿಢೀರ್ ಸುಮಾರು 300 ಅಡಿ ಕೆಳಕ್ಕೆ ಕುಸಿದ ಘಟನೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಆಗಸ್ಟ್ 4ರಂದು ನಡೆದ ಈ ಘಟನೆಯಲ್ಲಿ AI2379 ವಿಮಾನವು ತೀವ್ರ ಟರ್ಬುಲೆನ್ಸ್ಗೆ ಸಿಲುಕಿತ್ತು.

ವಿಮಾನದಲ್ಲಿ 137 ಪ್ರಯಾಣಿಕರು ಹಾಗೂ 8 ಸಿಬ್ಬಂದಿ ಇದ್ದರು. ಘಟನೆಯ ಬಳಿಕ ವಿಮಾನವನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಗಿತ್ತು. ಈ ವೇಳೆ 13 ಪ್ರಯಾಣಿಕರು ಹಾಗೂ 4 ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 17 ಮಂದಿ ಗಾಯಗೊಂಡಿದ್ದರು.
ಘಟನೆಯ ನಂತರ ಇಬ್ಬರು ಪೈಲಟ್ಗಳಿಗೂ ಡ್ರಗ್ಸ್ ಪರೀಕ್ಷೆ ನಡೆಸಲಾಗಿತ್ತು. ಮುಖ್ಯ ಪೈಲಟ್ನ ಪ್ರಾಥಮಿಕ ಪರೀಕ್ಷೆ ‘ನಾಟ್ ನೆಗೆಟಿವ್’ ಬಂದ ಹಿನ್ನೆಲೆಯಲ್ಲಿ ಮಾದರಿಯನ್ನು ದೃಢೀಕರಣ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವರದಿಗಳ ಪ್ರಕಾರ, ದೃಢೀಕರಣ ಪರೀಕ್ಷೆಯಲ್ಲಿ ಪೈಲಟ್ನ ಮಾದರಿಯಲ್ಲಿ ಮರಿಜುವಾನಾ (ಗಾಂಜಾ) ಪತ್ತೆಯಾಗಿದೆ ಎನ್ನಲಾಗಿದೆ.
ಘಟನೆಗೆ ಪೈಲಟ್ನ ಡ್ರಗ್ಸ್ ಸೇವನೆಯೇ ನೇರ ಕಾರಣ ಎಂದು ಇನ್ನೂ ದೃಢಪಟ್ಟಿಲ್ಲ. ವಿಮಾನದ ತಾಂತ್ರಿಕ ಅಂಶಗಳು, ಟರ್ಬುಲೆನ್ಸ್ ಹಾಗೂ ಕಾಕ್ಪಿಟ್ನಲ್ಲಿನ ಪರಿಸ್ಥಿತಿಯ ಬಗ್ಗೆಯೂ ತನಿಖೆ ನಡೆಯುತ್ತಿದೆ. AAIB ಪ್ರಕರಣದ ತನಿಖೆ ನಡೆಸುತ್ತಿದ್ದು, ಇಬ್ಬರು ಪೈಲಟ್ಗಳನ್ನು ತನಿಖೆ ಪೂರ್ಣಗೊಳ್ಳುವವರೆಗೆ ಹಾರಾಟ ಕರ್ತವ್ಯದಿಂದ ದೂರ ಇಡಲಾಗಿದೆ.




