ಹುಡುಗಿಯರ ಫೋಟೋ ಮಾರ್ಫ್ ಮಾಡಿ ಟೆಲಿಗ್ರಾಂ ನಲ್ಲಿ ಹಂಚಿಕೆ: ಆರೋಪಿ ಕಾಸರಗೋಡು ಪೊಲೀಸ್ ಬಲೆಗೆ

Share with

ಕಾಸರಗೋಡು: ಹುಡುಗಿಯರ ಫೋಟೋಗಳನ್ನು ಅವರ ಅರಿವಿಗೆ ತರದೆ ಅಥವಾ ಒಪ್ಪಿಗೆಗೆ ವಿರುದ್ಧವಾಗಿ ಸಂಗ್ರಹಿಸಿ, ತಂತ್ರಜ್ಞಾನದ ಸಹಾಯದಿಂದ ಮಾರ್ಫ್ ಮಾಡಿ ಅಶ್ಲೀಲ ಚಿತ್ರಗಳಾಗಿ ಪರಿವರ್ತಿಸಿ ಟೆಲಿಗ್ರಾಂ ಗ್ರೂಪ್‌ಗಳ ಮೂಲಕ ಪ್ರಸಾರ ಮಾಡಿದ ಪ್ರಕರಣದ ಪ್ರಮುಖ ಆರೋಪಿಯನ್ನು ಕಾಸರಗೋಡು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಮಲಪುರಂ ಜಿಲ್ಲೆಯ ಪುಳಕ್ಕಾಟಿರಿ ನಿವಾಸಿ ನಿಕೇತ್ (24) ಬಂಧಿತ ಆರೋಪಿ. ಬಂಧಿತ ನಿಕೇತ್ ಈ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾನೆ. ಮೊದಲ ಆರೋಪಿ ಕಾಸರಗೋಡು ಇರಿಯಣ್ಣಿ ನಿವಾಸಿ ಅನೂಪ್ ಪಿ. ಎಂಬವನನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು. ವಿವರವಾದ ತನಿಖೆಯಲ್ಲಿ, ಮೊದಲ ಆರೋಪಿ ನೀಡಿದ್ದ ಹುಡುಗಿಯರ ಫೋಟೋಗಳನ್ನು ಎಡಿಟ್ ಮಾಡಿ ಅಶ್ಲೀಲ ಚಿತ್ರಗಳಾಗಿ ಪರಿವರ್ತಿಸಿದ್ದು ಇದೀಗ ಬಂಧಿತ ಎರಡನೇ ಆರೋಪಿ ಎಂಬುದು ಪತ್ತೆಯಾಗಿದೆ.

ಸೆ. 25ರಂದು ಪುಳಕ್ಕಾಟಿರಿಯಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದರು. ಕಾಸರಗೋಡು ಸೈಬರ್ ಕ್ರೈಂ ಠಾಣೆಯಲ್ಲಿ ವಿಚಾರಣೆ ನಡೆಸಿ ಬಂಧಿಸಲಾಯಿತು. ನ್ಯಾಯಾಲಯಕ್ಕೆ ಹಾಜರುಪಡಿಸಿದ ಆರೋಪಿಯನ್ನು ಅ. 9ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಡಿಜಿಟಲ್ ಸಾಧನಗಳು, ಎಲೆಕ್ಟ್ರಾನಿಕ್ ದಾಖಲೆಗಳು, ಟೆಲಿಗ್ರಾಂ ಗ್ರೂಪ್‌ಗಳಲ್ಲಿನ ಮಾಹಿತಿಗಳು ಸೇರಿದಂತೆ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಘಟನೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬುದು ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *