ಉಪ್ಪಳ: ಉಪ್ಪಳ ನದಿಯಲ್ಲಿ ರವಿವಾರ ಬೆಳಗ್ಗೆ ಸ್ನಾನಕ್ಕೆ ಇಳಿದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸಂಭವಿಸಿದೆ.
ಪಶ್ಚಿಮ ಬಂಗಾಳ ಮೂಲದ 21 ವರ್ಷದ ಯುವಕ ವಿಶಾಲ್ ಮೃತ ಯುವಕ. ಉಪ್ಪಳದ ಮಾರ್ಬಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಶಾಲ್ ಹಾಗೂ ಇಬ್ಬರು ಸಹೋದ್ಯೋಗಿಗಳು ರವಿವಾರ ಬೆಳಗ್ಗೆ ನದಿಗೆ ಸ್ನಾನಕ್ಕೆಂದು ತೆರಳಿದ್ದರು. ಅವರಲ್ಲಿ ಒಬ್ಬ ದಡದಲ್ಲೇ ಉಳಿದುಕೊಂಡಿದ್ದರೆ, ವಿಶಾಲ್ ಹಾಗೂ ಮತ್ತೊಬ್ಬ ನದಿಗೆ ಇಳಿದಿದ್ದರು. ಸ್ನಾನ ಮಾಡುತ್ತಿದ್ದ ವೇಳೆ ವಿಶಾಲ್ ನೀರಿನಲ್ಲಿ ಮುಳುಗಿದ್ದು, ಸ್ನೇಹಿತ ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸಿ ಮೃತದೇಹವನ್ನು ಹೊರತೆಗೆದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.




