ಪೆರ್ಲದಲ್ಲಿ ₹4 ಲಕ್ಷ ಮೌಲ್ಯದ KSEB ಕೇಬಲ್ ಕಳವು; ನಾಲ್ವರು ಬಂಧನ

Share with

ಕಾಸರಗೋಡು: ಜಿಲ್ಲೆಯ ಎನ್ಮಕಜೆ ಪಂಚಾಯತ್ ವ್ಯಾಪ್ತಿಯ ಗುಣಾಜೆಯಲ್ಲಿ ಕೆಎಸ್‌ಇಬಿಗೆ ಸೇರಿದ ಸುಮಾರು ₹4 ಲಕ್ಷ ಮೌಲ್ಯದ 1,000 ಮೀಟರ್ LTAB ಕೇಬಲ್ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಸೆಪ್ಟೆಂಬರ್ 23ರ ಸಂಜೆ 5 ಗಂಟೆಯಿಂದ 24ರ ಬೆಳಗ್ಗೆ 9.30ರೊಳಗೆ ಪೆರ್ಲ ಕೆಎಸ್‌ಇಬಿ ವಿದ್ಯುತ್ ವಿಭಾಗದ ವ್ಯಾಪ್ತಿಯ ಗುಣಾಜೆ ಟ್ರಾನ್ಸ್‌ಫಾರ್ಮರ್ ಸಮೀಪ ರಸ್ತೆ ಬದಿಯಲ್ಲಿ ಇರಿಸಲಾಗಿದ್ದ ಕೇಬಲ್‌ಗಳನ್ನು ಕಳವು ಮಾಡಲಾಗಿತ್ತು. ಎರಡು ಡ್ರಮ್‌ಗಳಲ್ಲಿ ತಲಾ ಸುಮಾರು 500 ಮೀಟರ್ ಕೇಬಲ್ ಇತ್ತು.

ಮುಖ ಮುಚ್ಚಿಕೊಂಡಿದ್ದ ತಂಡ ಪಿಕಪ್ ವಾಹನದಲ್ಲಿ ಬಂದು ಕೇಬಲ್‌ಗಳನ್ನು ವಾಹನಕ್ಕೆ ತುಂಬಿಕೊಂಡು ಪರಾರಿಯಾಗಿತ್ತು. ಘಟನೆಯ ದೃಶ್ಯಗಳು ಸ್ಥಳೀಯ CCTV ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು.

CCTV ದೃಶ್ಯಗಳ ಆಧಾರದಲ್ಲಿ ವಾಹನದ ನೋಂದಣಿ ಸಂಖ್ಯೆ KL-14-AE-9095 ಪತ್ತೆಹಚ್ಚಿದ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಳವಾದ ಸಂಪೂರ್ಣ ಕೇಬಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ನೌಶಾದ್ (34), ಮೊಹಮ್ಮದ್ (42), ಮೊಹಮ್ಮದ್ ಶಾಹಿದ್ (29) ಹಾಗೂ ನವೀನ್ (48) ಎಂದು ಗುರುತಿಸಲಾಗಿದೆ. ಕಳವಾದ ಕೇಬಲ್ ಅನ್ನು ಪೆರ್ಲದ ಆಕ್ರಿ ಅಂಗಡಿಗೆ ತಂದು, ಅಲ್ಲಿಂದ ಗೋವಾಕ್ಕೆ ಸಾಗಿಸಲು ಯತ್ನಿಸುತ್ತಿದ್ದ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದ ತನಿಖೆ ವೇಳೆ ನೀರಚಾಲ್ ವಿಷ್ಣುಮೂರ್ತಿ ನಗರ ಬಳಿಯ ನಿರ್ಮಾಣ ಹಂತದ ಪೆಟ್ರೋಲ್ ಪಂಪ್‌ನಿಂದ ಕಬ್ಬಿಣದ ಸಾಮಗ್ರಿ ಕಳವು ಮಾಡಿದ ಪ್ರಕರಣದಲ್ಲೂ ಆರೋಪಿಗಳಿಗೆ ಸಂಬಂಧವಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಕೆಲವರಿಗಾಗಿ ತನಿಖೆ ಮುಂದುವರಿದಿದೆ.


Share with

Leave a Reply

Your email address will not be published. Required fields are marked *