ರಾಜ್ಯದಲ್ಲಿ ಚಳಿಗೆ ಕೊಲ್ಲಿ ಚಂಡಮಾರುತನೇ ಕಾರಣ

Share with

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪ್ರಭಾವ, ರಾಜ್ಯದಲ್ಲಿ ಮೋಡಗಳ ಪ್ರಮಾಣ ಕಡಿಮೆಯಾಗಿರುವುದು, ಒಣಹವೆ ಹಾಗೂ ತಣ್ಣನೆಯ ಗಾಳಿಯ ಸಂಚಾರದಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರಾತ್ರಿ ಮತ್ತು ಮುಂಜಾನೆ ಚಳಿಯ ಅನುಭವ ಹೆಚ್ಚಾಗಿದೆ.

ಹಗಲಿನಲ್ಲಿ ಬಿಸಿಲು ಮುಂದುವರಿದಿದ್ದರೂ, ಸಂಜೆ ಬಳಿಕ ತಾಪಮಾನ ಇಳಿಕೆಯಾಗುತ್ತಿದೆ. ಆದರೆ, ರಾಜ್ಯದಲ್ಲಿ ಅಧಿಕೃತವಾಗಿ ಚಳಿಗಾಲ ಇನ್ನೂ ಆರಂಭವಾಗಿಲ್ಲ. ನವೆಂಬರ್ ಅಂತ್ಯದ ವೇಳೆಗೆ ಚಳಿಗಾಲ ಆರಂಭವಾಗುವ ಸಾಧ್ಯತೆಯಿದ್ದು, ಡಿಸೆಂಬರ್ ಮತ್ತು ಜನವರಿಯಲ್ಲಿ ಚಳಿ ಹೆಚ್ಚಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವಿಜ್ಞಾನಿಗಳು ತಿಳಿಸಿದ್ದಾರೆ.

ಚಳಿಗೆ ಹಲವು ಕಾರಣಗಳು: ಬಂಗಾಳ ಕೊಲ್ಲಿಯಿಂದ ಅರಬ್ಬಿ ಸಮುದ್ರದ ಕಡೆಗೆ ತಣ್ಣನೆಯ ಗಾಳಿ ಬೀಸುತ್ತಿರುವುದು ರಾಜ್ಯದ ಹವಾಮಾನದ ಮೇಲೆ ಪರಿಣಾಮ ಬೀರುತ್ತಿದೆ. ಚಂಡಮಾರುತದ ಪ್ರಭಾವದಿಂದ ಮೋಡಗಳ ಪ್ರಮಾಣದಲ್ಲಿ ಬದಲಾವಣೆಯಾಗಿದ್ದು, ರಾಜ್ಯದಲ್ಲಿ ಶುಭ್ರ ಆಕಾಶ ಮತ್ತು ಒಣಹವೆ ಮುಂದುವರಿದಿದೆ. ಮೋಡ ಮತ್ತು ತೇವಾಂಶ ಹೆಚ್ಚಿರುವ ರಾತ್ರಿಗಳಲ್ಲಿ ಈ ರೀತಿಯ ಶಾಖ ನಷ್ಟ ಕಡಿಮೆಯಾಗುವುದರಿಂದ ಚಳಿಯ ಅನುಭವವೂ ತುಸು ಕಡಿಮೆಯಾಗುತ್ತದೆ.

ಬೆಳಗ್ಗೆ ಮತ್ತು ಸಂಜೆ ಮಂಜು ಕಾಣಿಸಿಕೊಳ್ಳುತ್ತಿರುವುದು, ಗಾಳಿಯ ದಿಕ್ಕು ಹಾಗೂ ತೇವಾಂಶದಲ್ಲಿನ ಬದಲಾವಣೆಗಳೂ ಸ್ಥಳೀಯವಾಗಿ ತಾಪಮಾನದ ಮೇಲೆ ಪರಿಣಾಮ ಬೀರುತ್ತಿವೆ. ಹೀಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಒಂದೇ ರೀತಿಯ ಚಳಿ ಕಂಡುಬರುತ್ತಿಲ್ಲ. ನವೆಂಬರ್ ಅಂತ್ಯದ ಬಳಿಕ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯಿದ್ದು, ಚಳಿಯ ತೀವ್ರತೆ ಕ್ರಮೇಣ ಹೆಚ್ಚಾಗಬಹುದು ಎಂದು ಹವಾಮಾನ ತಜ್ಞ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

ಒಣಹವೆ ಮುಂದುವರಿಕೆ: ರಾಜ್ಯಾದ್ಯಂತ ಬುಧವಾರದಿಂದ ಒಣಹವೆ ಮುಂದುವರಿಯುವ ಸಾಧ್ಯತೆಯಿದೆ. ಭಾರಿ ಮಳೆಯ ಮುನ್ಸೂಚನೆ ಇಲ್ಲದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯಾವುದೇ ಮುನ್ನೆಚ್ಚರಿಕೆ ನೀಡಿಲ್ಲ. ಮಂಗಳವಾರ ರಾಜ್ಯದಾದ್ಯಂತ ಗಮನಾರ್ಹ ಮಳೆಯಾಗಿಲ್ಲ ಎಂದು ಐಎಂಡಿ ತಿಳಿಸಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಇಳಿಕೆ

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಇಳಿಕೆ ದಾಖಲಾಗಿದೆ. ಮಂಗಳವಾರ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇದ್ದರೆ, ಮಂಗಳೂರಿನಲ್ಲಿ 34.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಲಬುರಗಿಯಲ್ಲಿ 35.1, ಬೀದರ್‌ನಲ್ಲಿ 32.4, ಬೆಳಗಾವಿಯಲ್ಲಿ 31.2, ಬಾಗಲಕೋಟೆಯಲ್ಲಿ 32.7, ಧಾರವಾಡದಲ್ಲಿ 32.8, ಗದಗದಲ್ಲಿ 32.4, ರಾಯಚೂರಿನಲ್ಲಿ 34.2, ಹಾವೇರಿಯಲ್ಲಿ 33.2, ದಾವಣಗೆರೆಯಲ್ಲಿ 30.5, ಮೈಸೂರಿನಲ್ಲಿ 28.1, ಶಿವಮೊಗ್ಗದಲ್ಲಿ 29.2 ಹಾಗೂ ಚಿತ್ರದುರ್ಗದಲ್ಲಿ 32.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.


Share with

Leave a Reply

Your email address will not be published. Required fields are marked *