ಮಂಗಳೂರು: ಬೈಕ್ ಕಳ್ಳತನ ಜಾಲ ಭೇದಿಸಿದ ಪೊಲೀಸರು; ಮೂವರು ಅಪ್ರಾಪ್ತರು ಸೇರಿ 7 ಮಂದಿ ವಶಕ್ಕೆ

Share with

₹4.50 ಲಕ್ಷ ಮೌಲ್ಯದ 9 ದ್ವಿಚಕ್ರ ವಾಹನಗಳು ವಶಕ್ಕೆ

ಮಂಗಳೂರು: ನಗರದಲ್ಲಿ ನಡೆದ ಸರಣಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು, ಮೂವರು ಅಪ್ರಾಪ್ತರು ಸೇರಿದಂತೆ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ಕಳವುಗೈದ ಆರು ಬೈಕ್‌ಗಳು ಸೇರಿದಂತೆ ಒಟ್ಟು ಒಂಬತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು ₹4.50 ಲಕ್ಷ ಎಂದು ಅಂದಾಜಿಸಲಾಗಿದೆ.

ಮಂಗಳೂರು ದಕ್ಷಿಣ ಮತ್ತು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 12ರಿಂದ 22ರ ನಡುವೆ ಹಲವು ಬೈಕ್ ಕಳ್ಳತನ ಪ್ರಕರಣಗಳು ನಡೆದಿದ್ದವು. ವೆಲೆನ್ಸಿಯಾದ ಡಾನ್ ಬಾಸ್ಕೋ ಹಾಸ್ಟೆಲ್ ಬಳಿ ನಿಲ್ಲಿಸಿದ್ದ ಕೆಟಿಎಂ ಡ್ಯೂಕ್, ಜೆಪ್ಪು ಮಾರುಕಟ್ಟೆ ಬಳಿ ನಿಲ್ಲಿಸಿದ್ದ ಯಮಹಾ ಎಫ್‌ಝಡ್, ಅತ್ತಾವರದ ಕೆಎಂಸಿ ಆಸ್ಪತ್ರೆ ಸಮೀಪದ ದುರ್ಗಾ ಹೋಟೆಲ್ ಎದುರಿನ ಬಜಾಜ್ ಡಿಸ್ಕವರ್ ಸೇರಿದಂತೆ ಹಲವು ದ್ವಿಚಕ್ರ ವಾಹನಗಳನ್ನು ಕಳವು ಮಾಡಲಾಗಿತ್ತು.

ಇದಲ್ಲದೆ, ಹೊಯಿಗೆ ಬಜಾರ್‌ನ ಭಾಗವತಿ ಅಪಾರ್ಟ್‌ಮೆಂಟ್ ಬಳಿ ನಿಲ್ಲಿಸಿದ್ದ ಮತ್ತೊಂದು ಕೆಟಿಎಂ ಡ್ಯೂಕ್ ಹಾಗೂ ಉಳ್ಳಾಲ ಠಾಣಾ ವ್ಯಾಪ್ತಿಯ ದೇರಳಕಟ್ಟೆ ಮತ್ತು ಕುಟ್ಟಾರ್ ಪ್ರದೇಶಗಳಲ್ಲಿ ನಿಲ್ಲಿಸಿದ್ದ ಬೈಕ್‌ಗಳೂ ಕಳವಾಗಿದ್ದವು.

ಈ ಸಂಬಂಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ನಾಲ್ಕು ಹಾಗೂ ಉಳ್ಳಾಲ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಗಳ ತನಿಖೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ತನಿಖೆ ಮತ್ತು ಮಾಹಿತಿ ಸಂಗ್ರಹದ ಆಧಾರದಲ್ಲಿ ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ವರದಿಯಾಗಿದೆ.

ದುಬಾರಿ ದ್ವಿಚಕ್ರ ವಾಹನಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಕಳವು ಮಾಡಿದ ಹಣವನ್ನು ಐಷಾರಾಮಿ ಜೀವನಕ್ಕಾಗಿ ಬಳಸುವ ಉದ್ದೇಶ ಹೊಂದಿದ್ದರು ಎಂಬ ಆರೋಪವೂ ಕೇಳಿಬಂದಿದೆ.

ಬಂಧಿತ ವಯಸ್ಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಮಂಗಳೂರು ದಕ್ಷಿಣ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ರಾಘವೇಂದ್ರ ಬೈಂದೂರು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಉಪನಿರೀಕ್ಷಕ ಮಾರುತಿ ಹಾಗೂ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು.


Share with

Leave a Reply

Your email address will not be published. Required fields are marked *