
ಬೇಲೂರು: ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಜಗಬೋರನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮತ್ತೆ ತೀವ್ರಗೊಂಡಿದ್ದು, ಗ್ರಾಮಸ್ಥರು ಹಾಗೂ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಆಹಾರ ಅರಸಿ ಕಾಡಿನಿಂದ ನಾಡಿನತ್ತ ಬರುತ್ತಿರುವ ಕಾಡಾನೆಗಳು ರೈತರ ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ ಎನ್ನಲಾಗಿದೆ. ಕಾಡಾನೆಗಳ ಹಾವಳಿಯಿಂದ ರೈತರು ಕಷ್ಟಪಟ್ಟು ಬೆಳೆದಿದ್ದ ಬೆಳೆಗಳಿಗೆ ಭಾರೀ ಹಾನಿಯಾಗಿದ್ದು, ಅಪಾರ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಹಣ ಹಾಗೂ ಶ್ರಮ ವ್ಯಯಿಸಿರುವ ರೈತರು, ಕಾಡಾನೆಗಳ ಉಪಟಳದಿಂದ ಕೈಗೆ ಬಂದ ಫಸಲು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಕಾಡಾನೆಗಳು ಯಾವ ಸಮಯದಲ್ಲಿ ಜಮೀನುಗಳಿಗೆ ಲಗ್ಗೆ ಇಡುತ್ತವೆ ಎಂಬ ಭಯದಿಂದ ರೈತರು ತಮ್ಮ ಜಮೀನುಗಳಿಗೆ ತೆರಳಲು ಸಹ ಆತಂಕ ಪಡುವಂತಾಗಿದೆ. ಪದೇಪದೇ ಸಂಭವಿಸುತ್ತಿರುವ ಇಂತಹ ಘಟನೆಗಳಿಂದ ಗ್ರಾಮೀಣ ಭಾಗದ ರೈತರ ಬದುಕು ದುಸ್ತರವಾಗುತ್ತಿದೆ.
ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಸ್ಥಳೀಯ ರೈತರ ಪ್ರಮುಖ ಬೇಡಿಕೆಯಾಗಿದೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಳೆ ನಷ್ಟವನ್ನು ಪರಿಶೀಲಿಸಬೇಕು. ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸುವುದರ ಜೊತೆಗೆ, ಕಾಡಾನೆಗಳು ಗ್ರಾಮ ಹಾಗೂ ಕೃಷಿ ಜಮೀನುಗಳಿಗೆ ಪ್ರವೇಶಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.




