ತೈಲ ಸಂಸ್ಕರಣಾ ಘಟಕದಲ್ಲಿ ಭಾರೀ ಸ್ಪೋಟ..!!

Share with

ವೈಜಾಗ್ (ವಿಶಾಖಪಟ್ಟಣ): ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ತೈಲ ಸಂಸ್ಕರಣಾಗಾರದಲ್ಲಿ ಸೋಮವಾರ ರಾತ್ರಿ ದಿಢೀರ್ ಸ್ಫೋಟದ ಶಬ್ದ ಕೇಳಿಬಂದಿದ್ದು, ಬಳಿಕ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಘಟಕದಿಂದ ದಟ್ಟವಾದ ಕಪ್ಪು ಹೊಗೆ ಮುಗಿಲೆತ್ತರಕ್ಕೆ ಚಿಮ್ಮಿದ್ದು, ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಮೂಡಿಸಿತ್ತು.

ಸಂಸ್ಕರಣಾಗಾರದ ಸಲ್ಫ‌ರ್ ಪಿಚ್ ಟ್ಯಾಂಕ್‌ನಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಆಕಾಶಕ್ಕೆ ಚಿಮ್ಮುತ್ತಿದ್ದ ಬೆಂಕಿಯ ಜ್ವಾಲೆ ಹಾಗೂ ದಟ್ಟ ಹೊಗೆಯ ದೃಶ್ಯಗಳು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದ್ದವು.

ಘಟನೆ ಕುರಿತು ಮಾಹಿತಿ ನೀಡಿರುವ ವಿಶಾಖಪಟ್ಟಣ ಪೊಲೀಸ್ ಕಮಿಷನ‌ರ್ ಶಂಖಬ್ರತ ಬಾಗ್ನಿ, ಬೆಂಕಿಯು ಕೇವಲ ಆ ನಿರ್ದಿಷ್ಟ ಟ್ಯಾಂಕ್‌ಗೆ ಮಾತ್ರ ಸೀಮಿತವಾಗಿದ್ದು, ಸಂಸ್ಕರಣಾಗಾರದ ಇತರ ವಿಭಾಗಗಳಿಗೆ ಯಾವುದೇ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಘಟನೆ ನಡೆದ ತಕ್ಷಣವೇ ಎಚ್‌ಪಿಸಿಎಲ್ ಸಂಸ್ಥೆಯು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಶೀಘ್ರವಾಗಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ ಎಂದು ತಿಳಿಸಿದೆ. ಅಲ್ಲದೆ, ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳು ಸಂಭವಿಸಿಲ್ಲ.

ಬೆಂಕಿಯನ್ನು ಪಿಚ್ ಟ್ಯಾಂಕ್ ಪ್ರದೇಶದಲ್ಲೇ ಸಂಪೂರ್ಣವಾಗಿ ನಿಯಂತ್ರಿಸಲಾಗಿದ್ದು, ಶುದ್ದೀಕರಣ ಘಟಕದ ಎಲ್ಲಾ ವಿಭಾಗಗಳು ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಂಸ್ಥೆಯು ಸ್ಪಷ್ಟಪಡಿಸಿದೆ.


Share with

Leave a Reply

Your email address will not be published. Required fields are marked *