ಏಪ್ರಿಲ್ 1ರಿಂದ ಪ್ಲಾಸ್ಟಿಕ್ ನೋಟುಗಳ ಪ್ರಾಯೋಗಿಕ ಬಳಕೆ?

Share with

ನವದೆಹಲಿ: 2027ರ ಏ.1ರಿಂದ ಹೊಸ ಮಾದರಿಯ 10 ರೂ. ಹಾಗೂ 20 ರೂ. ಮುಖಬೆಲೆಯ 200 ಕೋಟಿ ಪ್ಲಾಸ್ಟಿಕ್ ನೋಟುಗಳನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ ಸಿದ್ಧತೆ ನಡೆಸುತ್ತಿದೆ. ನೋಟುಗಳ ಬಾಳಿಕೆ, ನಿರ್ವಹಣೆ, ಸಾರ್ವಜನಿಕ ಸ್ವೀಕಾರ ಮತ್ತು ಕಾರ್ಯಾಚರಣೆಯ ಕಾರ್ಯಸಾಧ್ಯತೆಯನ್ನು ಪರೀಕ್ಷಿಸಲು ಈ ಪ್ರಯೋಗವನ್ನು ಮಾಡಲಾಗುತ್ತಿದೆ. ಪ್ರಸ್ತುತ ಚಲಾವಣೆಯಲ್ಲಿರುವ 10 ಮತ್ತು 20 ರೂ. ಕಾಗದದ ನೋಟುಗಳ ಗಾತ್ರ ಮತ್ತು ಅಳತೆಯನ್ನೇ ಈ ಹೊಸ ಪ್ಲಾಸ್ಟಿಕ್ ನೋಟುಗಳಿಗೂ ಮುಂದುವರಿಸಲಾಗುತ್ತದೆ.

ದೇಶದಲ್ಲಿ ಪ್ಲಾಸ್ಟಿಕ್ ಆಧಾರಿತ ಕರೆನ್ಸಿ ನೋಟುಗಳ ಬಳಕೆಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಿದ್ಧತೆ ನಡೆಸುತ್ತಿದೆ. ಈ ನೋಟುಗಳ ಪ್ರಾಯೋಗಿಕ ಪರೀಕ್ಷೆ ನಡೆಸುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗುತ್ತಿದೆ.

ಸಾಮಾನ್ಯ ಕಾಗದದ ನೋಟುಗಳಿಗಿಂತ ಹೆಚ್ಚು ಬಾಳಿಕೆ ಬರುವ ಪಾಲಿಮರ್ ನೋಟುಗಳನ್ನು ಪರಿಚಯಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇಂತಹ ನೋಟುಗಳು ಹರಿದುಹೋಗುವ ಸಾಧ್ಯತೆ ಕಡಿಮೆ ಇದ್ದು, ತೇವಾಂಶ ಮತ್ತು ಕೊಳೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಬಲ್ಲವು. ನಕಲಿ ನೋಟುಗಳ ತಯಾರಿಕೆಯನ್ನು ತಡೆಯಲು ಸಹ ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನು ಅಳವಡಿಸುವ ಅವಕಾಶವಿದೆ.

ಆರಂಭಿಕ ಹಂತದಲ್ಲಿ ₹10 ಮತ್ತು ₹20 ಮುಖಬೆಲೆಯ ಪಾಲಿಮರ್ ನೋಟುಗಳ ಪ್ರಾಯೋಗಿಕ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಪರೀಕ್ಷೆಯ ವೇಳೆ ಭಾರತೀಯ ಹವಾಮಾನ ಪರಿಸ್ಥಿತಿಗಳಲ್ಲಿ ನೋಟುಗಳ ಬಾಳಿಕೆ, ಬಳಕೆಯ ಅನುಕೂಲತೆ ಮತ್ತು ಭದ್ರತೆಯನ್ನು ಪರಿಶೀಲಿಸಲಾಗುತ್ತದೆ.

ಕಾಗದದ ನೋಟುಗಳು ರದ್ದಾಗುವುದಿಲ್ಲ

ಪ್ಲಾಸ್ಟಿಕ್ ನೋಟುಗಳ ಪ್ರಾಯೋಗಿಕ ಬಳಕೆಯ ನಿರ್ಧಾರದಿಂದ ಈಗಿರುವ ಕಾಗದದ ನೋಟುಗಳು ರದ್ದಾಗುವುದಿಲ್ಲ. ಪ್ರಸ್ತುತ ಕಾಗದದ ನೋಟುಗಳನ್ನು ಸಂಪೂರ್ಣವಾಗಿ ಬದಲಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.


Share with

Leave a Reply

Your email address will not be published. Required fields are marked *