ಬಾಲಿವುಡ್ ನಟರಿಗೆ ಬೆದರಿಕೆ ಹಾಕಿದ್ದ ಗ್ಯಾಂಗ್ ಸ್ಟಾರ್ ಅಮೆರಿಕಾದಲ್ಲಿ ಅರೆಸ್ಟ್..!

Share with

ನವದೆಹಲಿ: ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ಸಹಚರ ಹರಿಚಂದ್ ಜಾಟ್ ಅಲಿಯಾಸ್ ಹ್ಯಾರಿ ಬಾಕ್ಸರ್‌ನನ್ನು ಅಮೆರಿಕದ ಪೊಲೀಸರು ಬಂಧಿಸಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಅಮೆರಿಕದ ಇಮಿಗ್ರೇಷನ್ ಆ್ಯಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ICE) ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.

22ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ

ರಾಜಸ್ಥಾನದ ಕೊಟ್‌ಪುಟ್ಲಿ-ಬೆಹ್ರೋರ್ ಜಿಲ್ಲೆಯ ಚತರ್ಪುರ ಗ್ರಾಮದ ನಿವಾಸಿಯಾಗಿರುವ 40 ವರ್ಷದ ಹ್ಯಾರಿ ಬಾಕ್ಸರ್ ವಿರುದ್ಧ ಕೊಲೆ ಯತ್ನ, ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಹೊಂದಿರುವುದು ಸೇರಿದಂತೆ 22ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ವಿದೇಶದಲ್ಲಿದ್ದುಕೊಂಡೇ ಭಾರತದಲ್ಲಿ ಗ್ಯಾಂಗ್‌ನ ಅಪರಾಧ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದ ಆರೋಪ ಆತನ ಮೇಲಿದೆ.

ಬಾಲಿವುಡ್ ನಟರಿಗೆ ಬೆದರಿಕೆ

ಮುಂಬೈನಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯ ಹೊಣೆಯನ್ನು ಹ್ಯಾರಿ ಬಾಕ್ಸರ್ ಸಾಮಾಜಿಕ ಜಾಲತಾಣದ ಮೂಲಕ ಹೊತ್ತುಕೊಂಡಿದ್ದ ಎನ್ನಲಾಗಿದೆ. ಅಲ್ಲದೆ, ನಟ ರಣವೀರ್ ಸಿಂಗ್ ಸೇರಿದಂತೆ ಬಾಲಿವುಡ್‌ನ ಹಲವು ಗಣ್ಯರಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆಯಿಟ್ಟ ಆರೋಪವೂ ಆತನ ಮೇಲಿದೆ.

ವಿದೇಶದಿಂದಲೇ ಸುಲಿಗೆ ಜಾಲ ನಿರ್ವಹಣೆ

ವ್ಯಾಪಾರಿಗಳು ಹಾಗೂ ಶ್ರೀಮಂತ ಉದ್ಯಮಿಗಳಿಗೆ ವಾಟ್ಸಾಪ್, ಸಿಗ್ನಲ್ ಮತ್ತು ಇತರ ಅಂತಾರಾಷ್ಟ್ರೀಯ ಕರೆಗಳ ಮೂಲಕ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಜಾಲದಲ್ಲಿ ಹ್ಯಾರಿ ಬಾಕ್ಸರ್ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ. ಹಣ ನೀಡದವರಿಗೆ ಗುಂಡಿನ ದಾಳಿ ನಡೆಸುವ ಬೆದರಿಕೆಯನ್ನೂ ಹಾಕಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತಕ್ಕೆ ಕರೆತರಲು ಪ್ರಯತ್ನ

2023ರ ಏಪ್ರಿಲ್‌ನಲ್ಲಿ ಭಾರತದಿಂದ ಪರಾರಿಯಾಗಿದ್ದ ಹ್ಯಾರಿ ಬಾಕ್ಸರ್ ದುಬೈ, ಡೊಮಿನಿಕನ್ ರಿಪಬ್ಲಿಕ್, ಗಯಾನಾ ಹಾಗೂ ಮೆಕ್ಸಿಕೊ ಮಾರ್ಗವಾಗಿ ಅಮೆರಿಕ ತಲುಪಿದ್ದ ಎನ್ನಲಾಗಿದೆ. ಆತನ ಪತ್ತೆಗಾಗಿ ರಾಜಸ್ಥಾನದ ಆ್ಯಂಟಿ ಗ್ಯಾಂಗ್‌ಸ್ಟರ್ ಟಾಸ್ಕ್ ಫೋರ್ಸ್ (AGTF), ಸಿಬಿಐ ಹಾಗೂ ಇಂಟರ್‌ಪೋಲ್ ನಿರಂತರವಾಗಿ ಕಾರ್ಯಾಚರಣೆ ನಡೆಸಿದ್ದವು. 2024ರ ನವೆಂಬರ್‌ನಲ್ಲಿ ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡ ಹೊರಡಿಸಲಾಗಿತ್ತು.

ಸದ್ಯ ಅಮೆರಿಕದಲ್ಲಿ ಬಂಧಿತನಾಗಿರುವ ಹ್ಯಾರಿ ಬಾಕ್ಸರ್‌ನನ್ನು ಭಾರತಕ್ಕೆ ಕರೆತರಲು ರಾಜಸ್ಥಾನ ಪೊಲೀಸರು ಹಾಗೂ ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳು ಕಾನೂನು ಪ್ರಕ್ರಿಯೆ ಆರಂಭಿಸಿವೆ.


Share with

Leave a Reply

Your email address will not be published. Required fields are marked *