ಕಿನ್ನಿಗೋಳಿ: ದೇವರನ್ನು ತೋರಿಸುವುದಾಗಿ ನಂಬಿಸಿ ವಶೀಕರಣದ ನಾಟಕವಾಡಿ ಟೆಂಪೋ ಚಾಲಕರಿಂದ ಹಣ ಪೀಕಿಸುತ್ತಿದ್ದ ಸನ್ಯಾಸಿ ವೇಷಧಾರಿಗಳ ತಂಡದ ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕಿನ್ನಿಗೋಳಿಯಲ್ಲಿ ಸಂಭವಿಸಿದೆ. ತಂಡದಲ್ಲಿದ್ದ ಇನ್ನುಳಿದ ಇಬ್ಬರು ಪರಾರಿಯಾಗಿದ್ದಾರೆ.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಾಲ್ವರು ಸನ್ಯಾಸಿಗಳ ವೇಷ ಧರಿಸಿಕೊಂಡು ಶನಿವಾರ ಬೆಳಗ್ಗಿನಿಂದಲೇ ಓಡಾಡುತ್ತಿದ್ದರು. ಬಳಿಕ ಕಿನ್ನಿಗೋಳಿ ಟೆಂಪೋ ಪಾರ್ಕ್ಗೆ ಆಗಮಿಸಿದ ಅವರು, ಅಲ್ಲಿನ ಟೆಂಪೋ ಚಾಲಕರನ್ನು ಗುರಿಯಾಗಿಸಿಕೊಂಡು ವಂಚನೆಗೆ ಮುಂದಾಗಿದ್ದಾರೆ.
ಟೆಂಪೋ ಚಾಲಕರಿಗೆ ದೇವರನ್ನು ತೋರಿಸುವುದಾಗಿ ನಂಬಿಸಿ, ಅವರ ಕೈಗೆ ಯಾವುದೋ ವಸ್ತುವೊಂದನ್ನು ನೀಡಿ ಅದನ್ನು ಮಾಯ ಮಾಡುವ ರೀತಿಯಲ್ಲಿ ಮ್ಯಾಜಿಕ್ ಪ್ರದರ್ಶಿಸಿದ್ದಾರೆ. ಬಳಿಕ ನಿಮ್ಮ ಬಳಿಯಿರುವ ಹಣವನ್ನು ನೀವೇ ನಿಮ್ಮ ಕೈಯಾರೆ ನೀಡುವಂತೆ ಮಾಡುತ್ತೇವೆ ಎಂದು ನಂಬಿಸಿ, ವಶೀಕರಣದ ನಾಟಕವಾಡಿ ಚಾಲಕರ ಕಿಸೆಯಲ್ಲಿದ್ದ ಹಣವನ್ನು ಎಗರಿಸಿದ್ದಾರೆ ಎನ್ನಲಾಗಿದೆ.
ತಾವು ವಂಚನೆಗೊಳಗಾಗಿರುವು ದನ್ನು ಅರಿತ ಟೆಂಪೋ ಚಾಲಕರು ಕಾರ್ಯಪ್ರವೃತ್ತರಾಗಿ ಹಣ ಎಗರಿಸಿದ ತಂಡದ ಇಬ್ಬರು ಕಿನ್ನಿಗೋಳಿಯ ಚರ್ಚ್ ಸಮೀಪ ಇರುವ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿ ಅವರನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭ ತಂಡದ ಇಬ್ಬರು ಪರಾರಿಯಾಗಿದ್ದಾರೆ. ಉಳಿದ ಇಬ್ಬರನ್ನು ಮೂಲ್ಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರಿಂದ ಎಚ್ಚರಿಕೆ
ಸನ್ಯಾಸಿಗಳ ವೇಷ ಧರಿಸಿ ಸಾರ್ವಜನಿಕರನ್ನು ನಂಬಿಸಿ ಹಣ ದೋಚುವ ಕೃತ್ಯದಲ್ಲಿ ತೊಡಗಿದ್ದ ತಂಡದ ಇಬ್ಬರು ಸದಸ್ಯರಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.




