ಪುತ್ತೂರು: ರಾಜ್ಯ ಮಟ್ಟದ ಕ್ರೀಡಾಕೂಟ: ಕ್ರೀಡಾ ಜ್ಯೋತಿ ಹೊತ್ತ ರಥಕ್ಕೆ ಚಾಲನೆ

Share with

ಪುತ್ತೂರು: ಶ್ರೀ ರಾಮಕೃಷ್ಣ ಪ್ರೌಢ ಶಾಲೆಯಲ್ಲಿ ಡಿ.1ರಿಂದ 4ರವರೆಗೆ ನಡೆಯಲಿರುವ 17ರ ವಯೋಮಾನದ ಪ್ರೌಢಶಾಲಾ ಬಾಲಕ-ಬಾಲಕಿಯರ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಹಸಿರುವಾಣಿ ಸಮರ್ಪಣೆ ಹಾಗೂ ಕಾರ್ಯಕ್ರಮದ ಪ್ರಯುಕ್ತ ಕಡಬ ಹಾಗೂ ಪುತ್ತೂರು ತಾಲೂಕಿನಾದ್ಯಂತ ಸಂಚರಿಸುತ್ತಿರುವ ಕ್ರೀಡಾ ಜ್ಯೋತಿ ಹೊತ್ತ ರಥಕ್ಕೆ ಡಿ.1ರಂದು ಬೆಳಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಲಾಯಿತು.

ಕ್ರೀಡಾ ಜ್ಯೋತಿ ಹೊತ್ತ ರಥಕ್ಕೆ ಚಾಲನೆ ನೀಡಲಾಯಿತು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮತ್ತು ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರು ಜೊತೆಯಾಗಿ ತೆಂಗಿನಕಾಯಿ ಒಡೆದು ಕ್ರೀಡಾ ಜ್ಯೋತಿ ರಥಕ್ಕೆ ಚಾಲನೆಯನ್ನು ನೀಡಿ ಶುಭ ಹಾರೈಸಿದರು. ನಂತರ ದೇವಳದ ವಠಾರದಿಂದ ಹೊರಟ ರಥವು ಉಪ್ಪಿನಂಗಡಿ, ಆಲಂಕಾರು, ಕಡಬ, ಸವಣೂರು, ಕೆಯ್ಯೂರು, ಕುಂಬ್ರ ಸೇರಿದಂತೆ ವಿವಿಧ ಕಡೆಗಳಲ್ಲಿ ಸಂಚರಿಸಿತು.

ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಸಹಯೋಗದಲ್ಲಿ ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ನೇತೃತ್ವದಲ್ಲಿ ಕೊಂಬೆಟ್ಟಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಡಿ.1 ರಿಂದ 4 ರವರೆಗೆ `ಕ್ರೀಡಾ ಕಾರಂಜಿ’ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಯಲಿದೆ. ಡಿ.2 ರಂದು ಸಂಜೆ ಕ್ರೀಡಾ ಜ್ಯೋತಿ ರಥ ದರ್ಬೆಗೆ ಆಗಮಿಸಲಿದ್ದು, ಅಲ್ಲಿ ಅದ್ದೂರಿಯ ಸ್ವಾಗತ ನೀಡಲಾಗುವುದು.

ಉಪ್ಪಿನಂಗಡಿಯಲ್ಲಿ ಸ್ವಾಗತ
ಕ್ರೀಡಾ ಜ್ಯೋತಿಯನ್ನು ಉಪ್ಪಿನಂಗಡಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸ್ವಾಗತಿಸಲಾಯಿತು. ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ಹಾಗೂ ಕ್ರೀಡಾ ಸಮಿತಿಯ ವತಿಯಿಂದ ಬ್ಯಾಂಡ್ ಸೆಟ್‌ಗಳ ನಾದದೊಂದಿಗೆ ಉಪ್ಪಿನಂಗಡಿಯ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದ ಕ್ರೀಡಾ ಜ್ಯೋತಿಯ ಮೆರವಣಿಗೆಯು ಬಳಿಕ ಉಪ್ಪಿನಂಗಡಿ ಸರಕಾರಿ ಮಾದರಿ ಶಾಲಾ ವಠಾರದಲ್ಲಿ ಸಂಪನ್ನಗೊಂಡು, ಉಪ್ಪಿನಂಗಡಿ ವಲಯದಿಂದ ಸಂಗ್ರಹಿಸಲ್ಪಟ್ಟ ಹೊರೆಕಾಣಿಕೆಯೊಂದಿಗೆ ಮುಂದಿನ ಪ್ರಯಾಣವನ್ನು ಬೆಳೆಸಿತು.

ಈ ಸಂಧರ್ಭ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ| ರಾಜರಾಮ್ ಕೆ.ಬಿ., ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ  ಪ್ರಭು, ಸದಸ್ಯರಾದ ಸುರೇಶ ಅತ್ರಮಜಲು, ಯು.ಟಿ ತೌಸಿಫ್, ಸಂಜೀವ, ಎಸ್.ಡಿ.ಎಂ.ಸಿ ಅಧ್ಯಕ್ಷ ರವಿಚಂದ್ರ ಶಾಂತಿ, ಪ್ರಮುಖರಾದ ಬಾಲಚಂದ್ರ ಗುಂಡ್ಯ, ಶ್ರೀಧರ ಭಟ್, ಫಾರೂಕ್, ಮಜೀದ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಸಿ.ಆರ್.ಪಿ. ಅಶ್ರಫ್, ಮಂಜುನಾಥ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *