‘ಮಾಸ್ಟರ್ ಶೆಫ್ ಇಂಡಿಯಾ-2023’ ಪ್ರಶಸ್ತಿ ಮುಡಿಗೇರಿಸಿಕೊಂಡ ಮಂಗಳೂರಿನ ಯುವಕ

Share with

ಮಂಗಳೂರು: ಸೋನಿ ಲೈವ್ ಓಟಿಟಿ ಪ್ಲಾಟ್ ಫಾರ್ಮ್ ಆಯೋಜಿಸಿರುವ ‘ಮಾಸ್ಟರ್ ಶೆಫ್ ಇಂಡಿಯಾ 2023’ರ ಸ್ಪರ್ಧೆಯಲ್ಲಿ ಮಂಗಳೂರಿನ ಮೊಹಮ್ಮದ್ ಆಶಿಕ್ ಅವರು ವಿಜೇತರಾಗಿದ್ದಾರೆ.

ಶುಕ್ರವಾರ ಸ್ಪರ್ಧೆಯ ಫೈನಲ್ ಸಂಚಿಕೆ ಪ್ರಸಾರವಾಗಿದ್ದು ಅದರಲ್ಲಿ ಮೊಹಮ್ಮದ್ ಆಶಿಕ್ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಫೈನಲ್ ತಲುಪಿದ ರುಖ್ಸಾರ್ ಸಯೀದ್, ಸೂರಜ್ ಥಾಪಾ, ನಂಬಿ ಜೆಸ್ಸಿಕಾ ಮರಕ್ ಸೇರಿದಂತೆ ನಾಲ್ವರಲ್ಲಿ ಒಬ್ಬರಾಗಿದ್ದ ಮುಹಮ್ಮದ್ ಆಶಿಕ್, ‘ಮಾಸ್ಟರ್ ಶೆಫ್ ಇಂಡಿಯಾ’ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಸ್ಪರ್ಧೆಯ ಮೊದಲ ರನ್ನರ್ ಅಪ್ ಸ್ಥಾನವನ್ನು ನಂಬಿ ಜೆಸ್ಸಿಕಾ ಮರಕ್ ಅವರು ಹಾಗೂ ಎರಡನೇ ರನ್ನರ್ ಅಪ್ ಸ್ಥಾನವನ್ನು ರುಖ್ಸಾರ್ ಸಯೀದ್ ಅವರು ಪಡೆದುಕೊಂಡಿದ್ದಾರೆ.

ದೇಶಾದ್ಯಂತ ಭಾಗವಹಿಸಿದ ಸುಮಾರು 30 ಸಾವಿರ ಸ್ಪರ್ಧಾಳುಗಳ ಪೈಕಿ ಮುಹಮ್ಮದ್ ಆಶಿಕ್ ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಟಾಪ್ 12ರಲ್ಲಿ ಸ್ಥಾನ ಗಳಿಸಿದ್ದರು.

ಮೊಹಮ್ಮದ್ ಆಶಿಕ್ ಅವರು ನಗರದ ಬಲ್ಮಠದಲ್ಲಿ ‘ಕುಲ್ಕಿ ಹಬ್’ ಹೆಸರಿನ ಜ್ಯೂಸ್ ಅಂಗಡಿಯನ್ನು ಆರಂಭಿಸಿ ಇದರ ಜೊತೆಗೆ ನಗರದ ಬೇರೆ ಬೇರೆ ಕಾಲೇಜುಗಳಲ್ಲಿ ನಡೆಯುವ ನಾನಾ ಕಾರ್ಯಕ್ರಮಗಳ ಸಂದರ್ಭದಲ್ಲಿ ಸ್ಟಾಲ್ ಹಾಕಿ ವ್ಯಾಪಾರ ಮಾಡುತ್ತಿದ್ದರು. ಇವರು ಜೆಪ್ಪು ಮಹಾಕಾಳಿಪಡ್ಪುವಿನ ಅಬ್ದುಲ್ ಖಾದರ್ ಹಾಗೂ ಸಾರಮ್ಮ ದಂಪತಿಯ ಪುತ್ರನಾಗಿದ್ದಾರೆ.


Share with

Leave a Reply

Your email address will not be published. Required fields are marked *