24 ವರ್ಷಗಳ ಕಾಲ ದೇಶಸೇವೆ ಸಲ್ಲಿಸಿ, ಅನಾರೋಗ್ಯದಿಂದ ಕೊನೆಯುಸಿರೆಳೆದ ಹಾಸನದ ವೀರ ಯೋಧನಿಗೆ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ

Share with



ಹಾಸನ: ದೇಶದ ಗಡಿಯಲ್ಲಿ ಬರೋಬ್ಬರಿ 24 ವರ್ಷಗಳ ಕಾಲ ನಿಷ್ಠೆ ಮತ್ತು ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿದ್ದ ಹಾಸನ ಜಿಲ್ಲೆಯ ವೀರ ಯೋಧ ಕುಮಾರಸ್ವಾಮಿ ಅವರು ಅನಾರೋಗ್ಯದ ಕಾರಣದಿಂದ ನಿಧನರಾಗಿದ್ದಾರೆ. ಚಂಡೀಗಢದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು, ಸುದೀರ್ಘ ವರ್ಷಗಳ ಕಾಲ ದೇಶದ ಭದ್ರತೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರ ನಿಧನದ ಸುದ್ದಿ ಕುಟುಂಬಸ್ಥರು, ಬಂಧುಗಳು ಹಾಗೂ ಸಾರ್ವಜನಿಕರಲ್ಲಿ ತೀವ್ರ ದುಃಖವನ್ನುಂಟುಮಾಡಿದೆ.

ಯೋಧನ ಪಾರ್ಥಿವ ಶರೀರದ ಮುಂದೆ ಪತ್ನಿಯ ಕಣ್ಣೀರಿನ ಆಕ್ರಂದನ ಮುಗಿಲು ಮುಟ್ಟಿದ್ದು, ತಾಯಿಯ ದುಃಖವನ್ನು ಕಂಡ ಪುಟ್ಟ ಮಗಳು ಕಣ್ಣೀರು ಒರೆಸಿದ ದೃಶ್ಯ ನೆರೆದಿದ್ದವರ ಮನಕಲಕುವಂತಿತ್ತು. ದೇಶಸೇವೆಗೆ ತಮ್ಮ ಜೀವನವನ್ನು ಅರ್ಪಿಸಿದ್ದ ಯೋಧನ ಅಗಲಿಕೆಯಿಂದ ಕುಟುಂಬದಲ್ಲಿ ತುಂಬಲಾರದ ನೋವು ಆವರಿಸಿದೆ.

ಹಾಸನದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಯೋಧನ ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಲತಾ ಪವಾರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಶುಭನೀತಾ ಅವರ ನೇತೃತ್ವದಲ್ಲಿ ಅಧಿಕಾರಿಗಳು ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು, ಬಂಧುಗಳು ಹಾಗೂ ಅಭಿಮಾನಿಗಳು ಯೋಧನ ಅಂತಿಮ ದರ್ಶನ ಪಡೆದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

24 ವರ್ಷಗಳ ಕಾಲ ದೇಶದ ರಕ್ಷಣೆಗೆ ಸೇವೆ ಸಲ್ಲಿಸಿ, ಕೊನೆಗೆ ಅನಾರೋಗ್ಯಕ್ಕೆ ಬಲಿಯಾದ ವೀರ ಯೋಧನ ಸೇವೆ ಮತ್ತು ತ್ಯಾಗ ಸದಾ ಸ್ಮರಣೀಯ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ದುಃಖತಪ್ತ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಎಲ್ಲರೂ ಪ್ರಾರ್ಥಿಸಿದರು.


Share with

Leave a Reply

Your email address will not be published. Required fields are marked *