ಚೆನ್ನೈ: ತಮಿಳುನಾಡು ಸರ್ಕಾರದ ಮಹತ್ವಾಕಾಂಕ್ಷೆಯ ‘ತಾಯಿಮಾಮನ್ ತಂಗ ಮೋತಿರಂ ತಿಟ್ಟಂ’ ಯೋಜನೆಯ (Thaimaaman Thanga Mothiram Thittam) ಅರ್ಹತಾ ಮಾನದಂಡಗಳಲ್ಲಿ ಪ್ರಮುಖ ತಿದ್ದುಪಡಿ ತಂದಿದೆ.
ಮದುವೆಯ ನಂತರ ರಾಜ್ಯದಿಂದ ಹೊರಗೆ ನೆಲೆಸಿದ ಮಹಿಳೆಯರ ನವಜಾತ ಶಿಶುಗಳಿಗೂ ಈ ಯೋಜನೆಯ ಲಾಭ ಸಿಗಲಿದ್ದು, ಮಗುವಿನ ತಾಯಿಯ ಪೋಷಕರು (ಅಜ್ಜ-ಅಜ್ಜಿ) ತಮಿಳುನಾಡಿನ ಖಾಯಂ ನಿವಾಸಿಗಳಾಗಿದ್ದರೆ ಸಾಕಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಹೊಸ ಮಾರ್ಗಸೂಚಿಗಳ ಪ್ರಕಾರ, ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಶಿಶುಗಳಿಗೆ 1 ಗ್ರಾಂ ಉಚಿತ ಚಿನ್ನದ ಉಂಗುರವನ್ನು ನೀಡಲಾಗುತ್ತದೆ. ಮದುವೆಯ ನಂತರ ತಾಯಿ ಬೇರೆ ರಾಜ್ಯ ಅಥವಾ ಸ್ಥಳದಲ್ಲಿ ವಾಸಿಸುತ್ತಿದ್ದರೂ, ಹೆರಿಗೆಗಾಗಿ ತವರು ಮನೆಗೆ ಬಂದ ಸಂದರ್ಭದಲ್ಲಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಆದರೆ, ಈ ಸೌಲಭ್ಯವನ್ನು ಪಡೆಯಲು ತಾಯಿಯ ಪೋಷಕರು ತಮಿಳುನಾಡಿನ ಖಾಯಂ ನಿವಾಸಿಗಳು ಎಂಬುದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ.
ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸೆ.28 ರಂದು ಈ ಯೋಜನೆಯನ್ನು ಅಧಿಕೃತವಾಗಿ ಪ್ರಾರಂಭಿಸಿದ್ದರು. ಜೂನ್ 22, 2026 ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ತರಲಾದ ಈ ಯೋಜನೆಗೆ ಆರಂಭದಲ್ಲಿ ತಾಯಂದಿರು ತಮಿಳುನಾಡಿನ ಖಾಯಂ ನಿವಾಸಿಯಾಗಿರಬೇಕು ಎಂಬ ನಿಯಮವಿತ್ತು. ಆದರೆ ಯೋಜನೆಯ ಅನುಷ್ಠಾನದ ವೇಳೆ, ಮದುವೆಯಾಗಿ ಹೊರರಾಜ್ಯಕ್ಕೆ ತೆರಳಿ ಹೆರಿಗೆಗಾಗಿ ತವರು ಮನೆಗೆ ಬರುವ ಮಹಿಳೆಯರಿಗೆ ಯೋಜನೆ ಸಿಗದಿರುವುದು ಕಂಡುಬಂದಿದ್ದರಿಂದ, ಜೂನ್ 22, 2026 ರಿಂದಲೇ ಪೂರ್ವಾನ್ವಯವಾಗುವಂತೆ ನಿಯಮಗಳನ್ನು ಸಡಿಲಿಸಿ ಪರಿಷ್ಕೃತ ಆದೇಶ ಹೊರಡಿಸಲಾಗಿದೆ.





