ಗುಜರಾತ್: ಅತಿವೇಗವಾಗಿ ಬಂದ ಸರಕು ಸಾಗಣೆಯ ಟ್ರಕ್ ಒಂದು ರಸ್ತೆ ದಾಟುತ್ತಿದ್ದ ಕುರಿ ಮತ್ತು ಮೇಕೆಗಳ ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 25 ಪ್ರಾಣಿಗಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಗುಜರಾತ್‌ನ ಮೊರ್ಬಿ ಜಿಲ್ಲೆಯ ಮಾಳಿಯಾ-ಮಿಯಾನಾ ಬಳಿಯ ಕಚ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಈ ಭೀಕರ ಅಪಘಾತದ ದೃಶ್ಯಾವಳಿಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಮಾಲ್ದಾರಿ ಜನಾಂಗದ ಪಶುಪಾಲಕರು ತಮ್ಮ ಕುರಿ ಹಾಗೂ ಮೇಕೆಗಳ ಹಿಂಡಿನೊಂದಿಗೆ ಕಚ್ ಕಡೆಗೆ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಪ್ರಾಣಿಗಳು ಹೆದ್ದಾರಿ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಟ್ರಕ್ ಏಕಾಏಕಿ ಅವುಗಳ ಮೇಲೆ ಹರಿದಿದೆ.
ಡಿಕ್ಕಿಯ ರಭಸಕ್ಕೆ 23 ಕುರಿಗಳು ಮತ್ತು 2 ಮೇಕೆಗಳು ಸ್ಥಳದಲ್ಲೇ ಅಸುನೀಗಿದ್ದು, ಸುಮಾರು 25ಕ್ಕೂ ಹೆಚ್ಚು ಪ್ರಾಣಿಗಳು ತೀವ್ರವಾಗಿ ಗಾಯಗೊಂಡಿವೆ.
ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸಾಕುಪ್ರಾಣಿಗಳ ಮಾಲೀಕರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಟ್ರಕ್ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.





