
ಬೆಂಗಳೂರು, ಜನವರಿ 16: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಅಕ್ರಮವಾಗಿ ತಂದಿದ್ದ 23 ಕೋಟಿ ರೂ. ಮೌಲ್ಯದ ಗಾಂಜಾವನ್ನು (ganja) ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಬ್ಯಾಂಕಾಕ್ನಿಂದ ಅಕ್ರಮವಾಗಿ 23 ಕೆಜಿ ಗಾಂಜಾ ತಂದಿದ್ದ ಮೂವರನ್ನು ಬಂಧಿಸಿದ್ದು, ಎನ್ಡಿಪಿಎಸ್ ಖಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ.
ಬಂಧಿತ ಮೂವರು ಬ್ಯಾಂಕಾಕ್ನಿಂದ ಅಕ್ರಮವಾಗಿ 23 ಕೆಜಿಯ ಹೈಡ್ರೋಪೋನಿಕ್ಸ್, ಮೈರವಾನ್ ಮತ್ತು ಹೂ ಸೇರಿದಂತೆ ವಿವಿಧ ಬಗೆಯ ಗಾಂಜಾವನ್ನು ಪ್ರತ್ಯೇಕ ಕವರ್ಗಳಲ್ಲಿ ಪ್ಯಾಕಿಂಗ್ ಮಾಡಿಕೊಂಡು ಲಗೇಜ್ ಬ್ಯಾಗ್ನಲ್ಲಿಟ್ಟುಕೊಂಡು ಕೆಐಎಬಿಗೆ ಬಂದಿದ್ದರು.
ಈ ವೇಳೆ ಕೆಂಪೇಗೌಡ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ವೇಳೆ ಗಾಂಜಾ ಸಮೇತ ಮೂವರನ್ನು ಬಂಧಿಸಿದ್ದಾರೆ. ಇನ್ನು ಹೈಡ್ರೋಪೋನಿಕ್ ಗಾಂಜಾ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಬಾಳುತ್ತದೆ ಎನ್ನಲಾಗಿದೆ.