ಆದಿ ದ್ರಾವಿಡ ಸಮುದಾಯದ ಹಿರಿಯ ಮುಖಂಡ, ಸಕಲೇಶಪುರದ ಪಳನಿ ಇನ್ನಿಲ್ಲ.

Share with



ಸಕಲೇಶಪುರ: ಹಾಸನ ಜಿಲ್ಲೆಯ ಸಕಲೇಶಪುರದ ಆದಿ ದ್ರಾವಿಡ ಸಮುದಾಯದ ಹಿರಿಯ ಮುಖಂಡರು ಹಾಗೂ ಕರ್ನಾಟಕ ರಾಜ್ಯ ಡಾ. ಬಿ.ಆರ್. ಅಂಬೇಡ್ಕರ್ ಆದಿ ದ್ರಾವಿಡ (ಪೌರಕಾರ್ಮಿಕರ) ಮಹಾಸಂಘದ ರಾಜ್ಯ ಉಪಾಧ್ಯಕ್ಷರಾಗಿದ್ದ ಪಳನಿ ಅವರು ಗುರುವಾರ (ಅ.29) ರಾತ್ರಿ ನಿಧನರಾಗಿದ್ದಾರೆ.

ಸಮಾಜದ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಪಳನಿ ಅವರು ಆದಿ ದ್ರಾವಿಡ ಸಮುದಾಯದ ಹಿತಾಸಕ್ತಿ, ಹಕ್ಕುಗಳು ಹಾಗೂ ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ್ದರು. ಅವರ ನಿಧನದಿಂದ ಸಮುದಾಯವು ಓರ್ವ ಹಿರಿಯ ಮುಖಂಡ ಹಾಗೂ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ.

ಮೃತರ ಪಾರ್ಥಿವ ಶರೀರವನ್ನು ಸಕಲೇಶಪುರದ ಕುಶಾಲನಗರ ಬಡಾವಣೆಯಲ್ಲಿರುವ ಅವರ ಸ್ವಗೃಹದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗಿದೆ. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕರ್ನಾಟಕ ಆದಿ ದ್ರಾವಿಡ ಸಂಘ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಗೂ ಸಮುದಾಯದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಕುಟುಂಬದ ಮೂಲಗಳ ಮಾಹಿತಿ ಪ್ರಕಾರ, ಶುಕ್ರವಾರ (ಅ.30) ಸಕಲೇಶಪುರ ಪಟ್ಟಣದ ಸುಭಾಷ್ ಮೈದಾನದಲ್ಲಿರುವ ರುದ್ರಭೂಮಿಯಲ್ಲಿ ಪಳನಿ ಅವರ ಅಂತ್ಯಕ್ರಿಯೆ ನೆರವೇರಲಿದೆ.

ಮೃತರ ಕುಟುಂಬಸ್ಥರು, ಬಂಧುಗಳು ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ವಿವಿಧ ಸಂಘಟನೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.


Share with

Tags:

Leave a Reply

Your email address will not be published. Required fields are marked *