ಮಂಗಳೂರು: ಮಿನಿ ಲಾರಿ, ಕಾರು ಹಾಗೂ ಬಸ್ಸಿನ ನಡುವೆ ಸರಣಿ ಅಪಘಾತ ನಡೆದಿದ್ದು, ಲಾರಿ ಹಾಗೂ ಬಸ್ಸಿನ ನಡುವೆ ಅಪ್ಪಚ್ಚಿಯಾಗಿದ್ದ ಕಾರಿನ ಚಾಲಕನನ್ನು ಸ್ಥಳೀಯರು ಹೊರಗೆಳೆದು ರಕ್ಷಿಸಿದ ಘಟನೆ ರಾ.ಹೆ.66 ರ ಜಪ್ಪಿನಮೊಗರಿನಲ್ಲಿ ನಡೆದಿದೆ.
ಮಂಗಳೂರಿನ ಜಪ್ಪಿನಮೊಗರು ಹೆದ್ದಾರಿಯಲ್ಲಿ ಸೆ.9ರಂದು ಮಧ್ಯಾಹ್ನ ಈ ಘಟನೆ ನಡೆದಿದ್ದು, ತಲಪಾಡಿಯಿಂದ ಮಂಗಳೂರಿನ ಕಡೆಗೆ ಹೋಗುತ್ತಿದ್ದ ಮಿನಿ ಲಾರಿಯು ಕಾರಿಗೆ ಡಿಕ್ಕಿ ಹೊಡೆದು ನಿಂತಿದೆ. ಲಾರಿಯ ಹಿಂದೆ ಇದ್ದ ಕಾರಿನ ಚಾಲಕನು ಹಠಾತ್ತನೇ ಬ್ರೇಕ್ ಹೊಡೆದು ನಿಲ್ಲಿಸಿದ್ದು, ಈ ಕಾರಿಗೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕೇರಳ ಸರಕಾರಿ ಸಾರಿಗೆಯ ಮಲಬಾರ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರು ಎದುರಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಅಪ್ಪಚ್ಚಿಯಾಗಿದೆ.
ಅಪ್ಪಚ್ಚಿಯಾದ ಕಾರನ್ನು ತಲಪಾಡಿಯ ನಿವಾಸಿ, ಮಂಗಳೂರಿನ ಎಂ.ಸಿ.ಎಫ್ ಉದ್ಯೋಗಿ ದಿನೇಶ್ ಎಂಬವರು ಚಾಲನೆ ಮಾಡುತ್ತಿದ್ದು, ಅವರನ್ನು ಸ್ಥಳೀಯರು ಹಾಗೂ ವಾಹನ ಸವಾರರು ಹರಸಾಹಸ ಪಟ್ಟು ಹೊರಗೆಳೆದು ಆಸ್ಪತ್ರೆಗೆ ಸೇರಿಸಿದ್ದಾರೆ. ಕಾರು ಚಾಲಕ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.