ತೀವ್ರ ಬಡತನ ಮುಕ್ತ ರಾಜ್ಯ ಎಂಬ ಘೋಷಣೆಯನ್ನು ಸರ್ಕಾರ ಹಿಂಪಡೆಯಲಿ: ಎಂ.ಎಲ್. ಅಶ್ವಿನಿ

Share with

ಕಾಸರಗೋಡು: 2025 ನವೆಂಬರ್ 1 ರಂದು ಕೇರಳವನ್ನು ತೀವ್ರ ಬಡತನ ಮುಕ್ತ ರಾಜ್ಯವೆಂದು ಘೋಷಿಸಿದ ಪಿಣರಾಯಿ ವಿಜಯನ್ ಸರ್ಕಾರದ ಕ್ರಮವನ್ನು ಹಿಂಪಡೆಯಲು ವಿ.ಡಿ. ಸತೀಶನ್ ಸಿದ್ಧರಾಗಬೇಕೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಆಗ್ರಹಿಸಿದರು.

ಮಂಜೇಶ್ವರ ಗ್ರಾಮ ಪಂಚಾಯಿತಿಯ 7ನೇ ವಾರ್ಡ್‌ನಲ್ಲಿ ಶಿಥಿಲಾವಸ್ಥೆಯಲ್ಲಿರುವ ಮನೆಯಲ್ಲಿ ವಾಸಿಸುತ್ತಿರುವ ಬಡ ಕುಟುಂಬವನ್ನು ಭೇಟಿ ಮಾಡಿದ ಬಳಿಕ ಅವರು ಮಾತನಾಡಿದರು.

ಸುಭದ್ರವಾದ ಸೂರು ಹಾಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲದ ಅದೆಷ್ಟೋ ಕುಟುಂಬಗಳು ಕೇರಳದಲ್ಲಿ ಇಂದಿಗೂ ಇವೆ ಎಂದು ಅಶ್ವಿನಿ ಹೇಳಿದರು. ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಜಲ್ ಜೀವನ್ ಮಿಷನ್ ಯೋಜನೆಗಳನ್ನು ಸಂಪೂರ್ಣವಾಗಿ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಸಂಪೂರ್ಣ ವಿಫಲವಾಗಿವೆ.

ಇಂತಹ ಸಂಕಷ್ಟದಲ್ಲಿರುವ ಕುಟುಂಬಗಳು ಇರುವಾಗಲೇ ಕೇರಳವನ್ನು ತೀವ್ರ ಬಡತನ ಮುಕ್ತ ರಾಜ್ಯವೆಂದು ಘೋಷಿಸಿರುವುದು ವಾಸ್ತವಕ್ಕೆ ದೂರವಾದ ವಾದ. ನನೆಗುದಿಗೆ ಬಿದ್ದಿರುವ ‘ಕೇರಳ ಮಾದರಿ’ ಅಭಿವೃದ್ಧಿಯ ವೈಫಲ್ಯವನ್ನು ಮುಚ್ಚಿಹಾಕಲು ಈ ಘೋಷಣೆ ಮಾಡಲಾಗಿದೆ ಎಂದರು.

ಲೈಫ್ ಮಿಷನ್ ವಸತಿ ಯೋಜನೆಗೆ ಅರ್ಜಿ ಸಲ್ಲಿಸಿದ ಸಾವಿರಾರು ಕುಟುಂಬಗಳ ಕಾಯುವಿಕೆ ಇಂದಿಗೂ ಅನಿಶ್ಚಿತವಾಗಿಯೇ ಮುಂದುವರಿದಿದೆ. ಅರ್ಹರಾದ ಎಲ್ಲಾ ಕುಟುಂಬಗಳಿಗೂ ಸುರಕ್ಷಿತ ಮನೆ ಹಾಗೂ ಶುದ್ಧ ಕುಡಿಯುವ ನೀರನ್ನು ಖಾತರಿಪಡಿಸಲು ಸರ್ಕಾರ ಕೂಡಲೇ ತುರ್ತು ಕ್ರಮ ಕೈಗೊಳ್ಳಬೇಕೆಂದು ಎಂ.ಎಲ್. ಅಶ್ವಿನಿ ಒತ್ತಾಯಿಸಿದರು.

ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ., ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮಮತಾ ಸಾಗರ್ ಅವರೂ ಅಶ್ವಿನಿ ಅವರೊಂದಿಗೆ ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *