ಉಡುಪಿ: ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯಲ್ಲಿ ನಡೆದ ದಲಿತ ಯುವಕ ಕೃಷ್ಣ ಎಂಬವರ ಶೂಟೌಟ್ ಹತ್ಯೆ ಸ್ಥಳಕ್ಕೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿಯ ನಿಯೋಗ ಭೇಟಿ ನೀಡಿ, ಮಾಹಿತಿಗಳನ್ನ ಕಲೆ ಹಾಕಿತು.


ಪ್ರಕರಣದ ತನಿಖಾಧಿಕಾರಿ ಬ್ರಹ್ಮಾವರ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ದಿವಾಕರ್ ರನ್ನು ಭೇಟಿ ಮಾಡಿ ತನಿಖೆಯ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡಿತು.

ಶೂಟೌಟ್ ನಡೆದ ಸ್ಥಳದ ನಿವಾಸಿಗಳು ಕೃತ್ಯದ ಬಗ್ಗೆ ಕೆಲವು ಮಾಹಿತಿ ನೀಡಿದರು. ಅಮಾಯಕ ದಲಿತ ಯುವಕನ ಅಮಾನವೀಯ ಶೂಟೌಟ್ ಹತ್ಯೆಯ ಬಗ್ಗೆ ಸ್ಥಳೀಯ ಜನರು ಖೇದ ಮತ್ತು ಆತಂಕ ವ್ಯಕ್ತಪಡಿಸಿದರು. ಈ ಕೊಲೆ ಪ್ರಕರಣದ ತನಿಖಾಧಿಕಾರಿಗಳು ತನಿಖೆಯ ಪ್ರಗತಿ ಬಗ್ಗೆ ನಿಯೋಗಕ್ಕೆ ಮಾಹಿತಿ ನೀಡಿದರು.
ಪೊಲೀಸ್ ತನಿಖೆ ಇನ್ನೂ ಪರಿಣಾಮಕಾರಿಯಾಗಿ ನಡೆಸಬೇಕು. ಆರೋಪಿಗಳನ್ನು ಕೂಡಲೇ ಬಂಧನ ಮಾಡಬೇಕು ಎಂದು ನಿಯೋಗ ಆಗ್ರಹಿಸಿತು. ನಿಯೋಗದಲ್ಲಿ ದಲಿತ ಚಳವಳಿಯ ಮುಖಂಡರಾದ ಸುಂದರ್ ಮಾಸ್ತರ್, ಶ್ಯಾಮರಾಜ್ ಬಿರ್ತಿ, ಮಂಜುನಾಥ ಗಿಳಿಯಾರು, ವಿಶ್ವನಾಥ ಬೆಳ್ಳಂಪಳ್ಳಿ, ಶಾಮಸುಂದರ್ ತೆಕ್ಕಟ್ಟೆ, ಕೆ.ಸಿ.ರಾಜು ಬೆಟ್ಟಿನಮನೆ, ಶ್ರೀನಿವಾಸ ವಡ್ಡರ್ಸೆ, ಭಾಸ್ಕರ ಮಾಸ್ತರ್, ಕುಮಾರ್ ಕೋಟ, ಶಾಂತಿರಾಜ್ ಬಾರ್ಕೂರು, ಮಂಜುನಾಥ ಬಾಳ್ಕುದ್ರು, ಪ್ರಶಾಂತ್ ಬಿರ್ತಿ, ಕುಸುಮ ಮಂಜುನಾಥ್, ಗೋಪಾಲ್ ಕೊಡಂಕೂರು ಇದ್ದರು.




