ಉಡುಪಿ: ಕಳೆದೆರಡು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನೈರುತ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿ ಅಲ್ಪಮತಗಳ ಅಂತರದಿಂದ ಪರಾಭವಗೊಂಡಿದ್ದ ಎಸ್.ಪಿ.ದಿನೇಶ್ ಅವರು, ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಕಾಂಗ್ರೆಸ್ ವಿರುದ್ಧ ಬಂಡಾಯ ಸಾರಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಸ್ಪರ್ಧೆ ಪಕ್ಷದ ವಿರುದ್ಧ ಅಲ್ಲ, ಪಕ್ಷದ ಪರವಾಗಿ ನಿಂತಿರುವ ಪಕ್ಷಾಂತರಿಯ ವಿರುದ್ಧ. ಕ್ಷೇತ್ರದ ಮತದಾರರ ಒತ್ತಾಸೆಯಂತೆ, ಅವರ ಬೆಂಬಲದಿಂದ ತಾನು ಸ್ಪರ್ಧಿಸುತ್ತಿದ್ದೇನೆ ಎಂದರು.
ಪಕ್ಷದ ಹಿರಿಯ ನಾಯಕರು ನೀಡಿದ ಭರವಸೆಯಂತೆ ಕಳೆದ 10 ತಿಂಗಳಿನಿಂದ ಚುನಾವಣೆಗೆ ಸಿದ್ಧತೆಯನ್ನು ಮಾಡಿಕೊಂಡಿದ್ದೆ. ಆದರೆ ಕೊನೆಯ ಕ್ಷಣದಲ್ಲಿ ಇತ್ತೀಚೆಗೆ ಪಕ್ಷಕ್ಕೆ ಬಂದ ಆಯನೂರು ಮಂಜುನಾಥ್ ಅವರಿಗೆ ಪಕ್ಷದ ಟಿಕೇಟ್ ನೀಡಿರುವುದು ನನಗೆ ಬೇಸರ ತರಿಸಿದೆ. ಹಿಂದಿನ ಎರಡು ಚುನಾವಣೆಯಲ್ಲಿ ಸೋತ ಕಾರಣಕ್ಕೆ ನನಗೆ ಟಿಕೇಟ್ ನಿರಾಕರಿಸಿದ್ದರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೇಟ್ ನೀಡಬೇಕಿತ್ತು. ಆದರೆ ಪಕ್ಷಾಂತರಿಗೆ, ಕೆಲವೇ ತಿಂಗಳ ಹಿಂದಿನವರೆಗೆ ಕಾಂಗ್ರೆಸ್ ನಾಯಕರನ್ನೆಲ್ಲಾ ಬಯ್ಯುತಿದ್ದ ವ್ಯಕ್ತಿಗೆ ಟಿಕೇಟ್ ನೀಡಿರುವುದು ನೋವು ತಂದಿದೆ ಎಂದು ದಿನೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಕಳದ ವಕೀಲರಾದ ಸುರೇಶ್ ಪೂಜಾರಿ, ಶಿವಮೊಗ್ಗದ ಈಶ್ವರ್ ಉಪಸ್ಥಿತರಿದ್ದರು.