ದೆಹಲಿಯಲ್ಲಿ 4ನೇ ಹಂತದ ಮೆಟ್ರೋ ಮಾರ್ಗ, ದೇಶದಲ್ಲಿ 1000 ಕಿಮೀ ಮೆಟ್ರೋ ಸಂಚಾರ, ದಾಖಲೆ

Share with

ನವದೆಹಲಿ, ಜನವರಿ 05: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ರವಿವಾರ (ಜ.05) ದೆಹಲಿ ಮೆಟ್ರೋದ ನಾಲ್ಕನೇ ಹಂತ (Delhi Metro 4th Phase) ಜನಕಪುರಿ ಮತ್ತು ಕೃಷ್ಣಾ ಪಾರ್ಕ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಸುಮಾರು 1,200 ಕೋಟಿ ರೂ. ಮೌಲ್ಯದ ಯೋಜನೆ ಇದಾಗಿದೆ. ಇದೇ ವೇಳೆ, ದೆಹಲಿ ಮೆಟ್ರೋ 4ನೇ ಹಂತದ 26.5 ಕಿಲೋಮೀಟರ್ ರಿಥಾಲಾ-ಕುಂಡ್ಲಿ ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತಾರೆ. ಇದರ ಅಂದಾಜು ವೆಚ್ಚ 6,230 ಕೋಟಿ ರೂ. ಆಗಿದೆ. ಹೊಸ ಕಾರಿಡಾರ್ ದೆಹಲಿಯ ರಿಥಾಲಾವನ್ನು ಹರಿಯಾಣದ ನಾಥುಪುರ್ (ಕುಂಡ್ಲಿ) ಗೆ ಸಂಪರ್ಕಿಸುತ್ತದೆ.

ದೇಶದಲ್ಲಿ 1000 ಕಿಮೀ ಮೆಟ್ರೋ ರೈಲು ಸಂಚಾರ
ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದ 23 ನಗರಗಳಲ್ಲಿ ಒಟ್ಟು 1000 ಕಿಮೀನಷ್ಟು ಮೆಟ್ರೋ ರೈಲು ಸಂಚರಿಸುತ್ತಿದೆ. ಈ ಮೂಲಕ ಭಾರತವು ವಿಶ್ವದ 3ನೇ ಅತಿದೊಡ್ಡ ಮೆಟ್ರೋ ಮಾರ್ಗ ಹೊಂದಿದ ದೇಶವಾಗಿ ಹೊರಹೊಮ್ಮಿದೆ. ಚೀನಾ ಮತ್ತು ಅಮೆರಿಕದ ನಂತರ ಭಾರತ ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ರೈಲು ಮಾರ್ಗವನ್ನು ಹೊಂದಿರುವ ದೇಶವಾಗಿದೆ.

ಪ್ರಧಾನಿ ಮೋದಿ ರವಿವಾರ ಒಟ್ಟು 12,200 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದು, ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಭಾರತದಲ್ಲಿ ಮೆಟ್ರೊ ನಿರ್ಮಾಣಕ್ಕೆ ಪ್ರತಿ ಕಿಲೋಮೀಟರ್‌ಗೆ ಸರಾಸರಿ 407 ಕೋಟಿ ರೂ. ತಗಲುತ್ತದೆ ಎಂದು ವರದಿಯಾಗಿದೆ. ಭಾರತೀಯ ಮೆಟ್ರೋಗಳಲ್ಲಿ ಪ್ರತಿದಿನ 10 ಮಿಲಿಯನ್ ಪ್ರಯಾಣಿಕರು ಸಂಚರಿಸುತ್ತಾರೆ ಎಂದು ತಿಳಿದುಬಂದಿದೆ.


Share with

Leave a Reply

Your email address will not be published. Required fields are marked *