
ಮಂಗಳೂರು: ಬೀದರ್ ಎಟಿಎಂ ದರೋಡೆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಳ್ಳಾಲದಲ್ಲೂ ಹಗಲು ಹೊತ್ತಿನಲ್ಲಿ ಬ್ಯಾಂಕ್ ದರೋಡೆ ನಡೆದಿದೆ. ಉಳ್ಳಾಲ ತಾಲೂಕಿನ ಕೆಸಿ ರೋಡ್‌ನ ಕೋಟೆಕಾರು ಬ್ಯಾಂಕ್‌ಗೆ ನುಗ್ಗಿದ ಐವರು ಮುಸುಕುಧಾರಿಗಳು ಬಂದೂಕಿನಿಂದ ಬ್ಯಾಂಕ್ ಸಿಬ್ಬಂದಿ, ಅಧಿಕಾರಿಗಳನ್ನು ಬೆದರಿಸಿ ಚಿನ್ನಾಭರಣ, ನಗದು ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ. ಬಂದೂಕಿನಿಂದ ಬ್ಯಾಂಕ್ ಸಿಬ್ಬಂದಿಯನ್ನು ಬೆದರಿಸಿ ಚಿನ್ನಾಭರಣ, ನಗದು ದರೋಡೆ ಮಾಡಿ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.


ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಇರುವುದರಿಂದ ಹೆಚ್ಚಿನ ಪೊಲೀಸರು ಭದ್ರತೆಗೆ ತೆರಳಿದ್ದರು. ಇದೇ ದರೋಡೆಗೆ ಗುರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣೆ ಪೊಲೀಸರು ಹಾಗೂ ಶ್ವಾನ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬ್ಯಾಂಕ್‌ಗೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದು ಯುಟಿ ಖಾದರ್ ಅವರ ವಿಧಾನಸಭಾ ಕ್ಷೇತ್ರವಾಗಿದೆ.
ಬ್ಯಾಂಕ್ ದರೋಡೆ ವಿಚಾರವಾಗಿ ಮಂಗಳೂರಿನಲ್ಲಿ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಪ್ರತಿಕ್ರಿಯಿಸಿದ್ದು, ಕೆಸಿ ರೋಡ್‌ನ ಕೋಟೆಕಾರು ಬ್ಯಾಂಕ್‌ನಲ್ಲಿ ಚಿನ್ನಾಭರಣ, ನಗದು ದರೋಡೆಯಾಗಿದೆ. ತಲ್ವಾರ್, ಗನ್‌ನಿಂದ ಬೆದರಿಸಿ ಬ್ಯಾಂಕ್ ದರೋಡೆ ಮಾಡಿದ ಮಾಹಿತಿ ದೊರೆತಿದೆ. ಜನಸಂದಣಿ ಕಡಿಮೆ ಇರುವ ಸಮಯದಲ್ಲೇ ದರೋಡೆ ನಡೆಸಿದ್ದಾರೆ. ಆರೋಪಿಗಳ ಬಂಧಿಸಲು ವಿಶೇಷ ತಂಡ ರಚನೆ ಮಾಡಲು ಸೂಚನೆ ನೀಡಲಾಗಿದೆ. ಜಿಲ್ಲಾಡಳಿತದಿಂದ ಪೊಲೀಸರಿಗೆ ಸಂಪೂರ್ಣ ಸಹಕಾರ ಕೊಡುತ್ತೇವೆ. ಪೊಲೀಸರು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದು ಖಾದರ್ ಹೇಳಿದ್ದಾರೆ.




