ಸರಕಾರಿ ಶಾಲೆಗೆ ಖಾಸಗಿ ಶಾಲಾ ಮಕ್ಕಳು..! ಶಾಲಾ ವಿರುದ್ಧ FIR

Share with

ಬೆಂಗಳೂರು: 9ನೇ ತರಗತಿಯಲ್ಲಿ ಕಡಿಮೆ ಅಂಕ ಪಡೆದ ಮಕ್ಕಳನ್ನು ತಾವೇ ಸರ್ಕಾರಿ ಶಾಲೆಗೆ ಸೇರಿಸಿ, ಎಸ್ಎಸ್‌ಎಲ್‌ಸಿ ಪರೀಕ್ಷೆ ಬರೆಸಿದ ಆರೋಪದ ಮೇಲೆ ಇಲ್ಲಿನ ಖಾಸಗಿ ಶಾಲೆಯ ವಿರುದ್ಧ ಎಫ್‌ಐಆ‌ರ್ ದಾಖಲಾಗಿದೆ.

ಬಾಲಕಿಯೊಬ್ಬಳ ಪೋಷಕರಾದ ಅರುಣಾ ಅವರ ದೂರಿನ ಮೇರೆಗೆ ಇಲ್ಲಿನ ವಸಂತ ನಗರದ ಸೇಂಟ್ ಮೇರೀಸ್ ಬಾಲಕಿಯರ ಪ್ರೌಢಶಾಲೆ ಮೂವರು ಶಿಕ್ಷಕರ ವಿರುದ್ಧ ಹೈಗೌಂಡ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಲೆಯ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಗೆ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.

‘ನಮ್ಮ ಮಗಳನ್ನು ಪ್ರಾಥಮಿಕ ಶಿಕ್ಷಣದಿಂದಲೂ ಖಾಸಗಿ ಶಾಲೆಯಲ್ಲೇ ಓದಿಸಿದ್ದೇವೆ. ಪ್ರತಿ ವರ್ಷವೂ ದುಬಾರಿ ಶುಲ್ಕ ಕಟ್ಟಿದ್ದೇವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದಾಗ ವಿಷಯ ಗೊತ್ತಾಯಿತು. ಕಲಿಕೆಯಲ್ಲಿ ಹಿಂದುಳಿದ ಕಾರಣಕ್ಕೆ 9ನೇ ತರಗತಿಯ ನಂತರ ಆ ಶಾಲೆಯ ಆಡಳಿತ ಮಂಡಳಿ ಸಮೀಪದ ಸರ್ಕಾರಿ ಶಾಲೆಗೆ ಸೇರಿಸಿದೆ. ಅಲ್ಲೇ ಪರೀಕ್ಷೆ ಬರೆಸಿದೆ. ಇದು ಅನ್ಯಾಯ. ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

‘ನಮ್ಮ ಮಕ್ಕಳು ಅನುತ್ತೀರ್ಣರಾಗುವಷ್ಟು ಕಲಿಕೆಯಲ್ಲಿ ಹಿಂದುಳಿದಿರಲಿಲ್ಲ. ಖಾಸಗಿ ಶಾಲೆಯಲ್ಲೇ ಪಾಠ ಮಾಡಿದ್ದಾರೆ. ಪರೀಕ್ಷೆಗಾಗಿ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ಆದರೆ, ಸರ್ಕಾರಿ ಶಾಲೆಯಲ್ಲಿ ನಿಗದಿತ ಹಾಜರಾತಿ ದೊರೆಯದ ಕಾರಣ ಅಲ್ಲಿ ಆಂತರಿಕ ಅಂಕಗಳನ್ನು ನೀಡಿಲ್ಲ. ಇದರಿಂದ ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಹೀಗೆ 10 ಮಕ್ಕಳಿಗೆ ಅನ್ಯಾಯವಾಗಿದೆ’ ಎಂದು ಮತ್ತೊಬ್ಬ ಪೋಷಕರು ಆರೋಪಿಸಿದ್ದಾರೆ.

‘ಪೋಷಕರ ಗಮನಕ್ಕೂ ಬಾರದೆ ಅನಾಥ ಮಕ್ಕಳು ಎಂದು ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ಸರ್ಕಾರಿ ಶಾಲೆ ಸಮವಸ್ತ್ರ ಹಾಕಿ ಫೋಟೊ ಸಹ ತೆಗೆದುಕೊಂಡಿದ್ದಾರೆ. ನಂತರ ಪರೀಕ್ಷೆಯ ಪ್ರವೇಶಪತ್ರ ನೀಡಿ, ಸರ್ಕಾರಿ ಶಾಲೆಯಲ್ಲೇ ಪರೀಕ್ಷೆ ಬರೆಸಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.


Share with

Leave a Reply

Your email address will not be published. Required fields are marked *