ಕುಮಟಾ ಬಳಿಯ ಗುಹೆಯೊಳಗೆ ಇಬ್ಬರು ಮಕ್ಕಳ ಜೊತೆ ರಷ್ಯಾದ ಮಹಿಳೆಯ ನಿಗೂಢ ವಾಸ

Share with

ಕುಮಟಾ, ಜುಲೈ 12: ಉತ್ತರ ಕನ್ನಡ ಜಿಲ್ಲೆಯ ಕುಮಟಾ (Kumta) ತಾಲ್ಲೂಕಿನ ರಾಮತೀರ್ಥ ಬೆಟ್ಟದಲ್ಲಿರುವ ಗುಹೆಯಿಂದ 40 ವರ್ಷದ ರಷ್ಯಾದ ಮಹಿಳೆ ಮತ್ತು ಆಕೆಯ ಇಬ್ಬರು ಚಿಕ್ಕ ಮಕ್ಕಳನ್ನು ರಕ್ಷಿಸಲಾಗಿದೆ. ಅಲ್ಲಿ ಅವರು ಸುಮಾರು ಎರಡು ವಾರಗಳಿಂದ ಏಕಾಂತದಲ್ಲಿ ವಾಸಿಸುತ್ತಿದ್ದರು. ಮೋಹಿ ಎಂದು ಗುರುತಿಸಲ್ಪಟ್ಟ ಈ ಮಹಿಳೆ ತನ್ನ ಹೆಣ್ಣುಮಕ್ಕಳಾದ 6 ವರ್ಷದ ಪ್ರೇಯಾ ಮತ್ತು 4 ವರ್ಷದ ಅಮಾ ಜೊತೆ ದಟ್ಟವಾದ ಕಾಡುಗಳು ಮತ್ತು ಕಡಿದಾದ ಇಳಿಜಾರುಗಳಿಂದ ಆವೃತವಾದ ನೈಸರ್ಗಿಕ ಗುಹೆಯೊಳಗೆ ವಾಸವಾಗಿದ್ದರು. ರುದ್ರ ವಿಗ್ರಹದ ಬಳಿ ಕುಟುಂಬವು ತಾತ್ಕಾಲಿಕ ವಾಸಸ್ಥಳವನ್ನು ನಿರ್ಮಿಸಿಕೊಂಡಿತ್ತು. ಅಲ್ಲಿ ಮೋಹಿ ತನ್ನ ದಿನಗಳನ್ನು ಪ್ರಾರ್ಥನೆ ಮತ್ತು ಧ್ಯಾನದಲ್ಲಿ ಕಳೆದಿದ್ದಾಳೆಂದು ಹೇಳಲಾಗುತ್ತಿದೆ. ಆಕೆ ಆಧ್ಯಾತ್ಮಿಕ ಶಾಂತಿಯನ್ನು ಬಯಸಿ ಆ ಗುಹೆಗೆ ತೆರಳಿದ್ದಾಗಿ ಹೇಳಿಕೊಂಡಿದ್ದಾರೆ.


ಮಾಮೂಲಿನಂತೆ ಗಸ್ತು ತಿರುಗುತ್ತಿದ್ದಾಗ ಪೊಲೀಸರ ಕಣ್ಣಿಗೆ ಆ ದೂರದ ಬೆಟ್ಟದ ಗುಹೆಯ ಹೊರಗೆ ಬಟ್ಟೆ ಒಣಗಿ ಹಾಕಿದ್ದು ಕಾಣಿಸಿತ್ತು. ರೌಂಡ್ಸ್ ನಲ್ಲಿದ್ದ ಪೊಲೀಸರಿಗೆ ಗುಡ್ಡದ ಮೇಲಿನ ಲಿಂಗ ಪೂಜೆ ಮಾಡಿರುವುದು ಕಂಡಿದೆ. ಅನುಮಾನ ಬಂದು ಗುಹೆ ಒಳಗಡೆ ಹೋಗುತ್ತಿದ್ದಂತೆ ಬಟ್ಟೆ ಧರಿಸದ ಪುಟ್ಟ ಮಗು ಓಡಿ ಹೊರ ಬಂದಿದೆ. ಪೊಲೀಸರನ್ನು ನೋಡಿ ಒಳಗೆ ಓಡಿ ಹೋದ ಪುಟ್ಟ ಮಗುವಿನ ಹಿಂದೆ ಹೋದಾಗ ಚಿಕ್ಕ ದೀಪವನ್ನಿಟ್ಟುಕೊಂಡು ತನ್ನ ದೊಡ್ಡ ಮಗುವಿಗೆ ಚಿತ್ರ ಬಿಡಿಸುವುದನ್ನು ಹೇಳಿಕೊಡುತ್ತಿದ್ದ ಮಹಿಳೆಯನ್ನು ಕಂಡು ಪೊಲೀಸರಿಗೆ ಅಚ್ಚರಿ ಆಗಿತ್ತು. ಆ ಗುಹೆ ಸಂಪೂರ್ಣವಾಗಿ ಕತ್ತಲಾಗಿದ್ದು ಗುಹೆಯ ಸುತ್ತ ಬೃಹತ್ ಗಾತ್ರದ ಸರ್ಪ ಗಳಿವೆ. ಆ ಪ್ರದೇಶದಲ್ಲಿ ಟ್ರೆಕ್ಕಿಂಗ್ ಕೂಡ ನಿಷೇಧಿಸಿ ಸುತ್ತಲೂ ಫೆನ್ಸಿಂಗ್ ಹಾಕಲಾಗಿದೆ. ಫೆನ್ಸಿಂಗ್ ಇದ್ದರೂ ಪಕ್ಕದ ಗುಡ್ಡದಿಂದ ಗುಹೆ ಒಳಗಡೆ ಹೋಗಿ ನೆಲೆಸಿದ್ದ ರಷ್ಯಾದ‌ ಮಹಿಳೆ ಈ ಹಿಂದೆಯೂ ಬಹಳಷ್ಟು ಬಾರಿ ಈ ಗುಹೆಯಲ್ಲಿ ಬಂದು ನೆಲೆಸಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *