ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾ ದೇವಿ (87) ವಿಧಿವಶರಾಗಿದ್ದಾರೆ. ಸುಮಾರು 6 ದಶಕಗಳ ಕಾಲ ಚಿತ್ರರಂಗದ ಸೇವೆ ಮಾಡಿರುವ ಇವರು 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದ ಸಾಧನೆಗೆ ಇವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ನೀಡಿ ಪುರಸ್ಕರಿಸಿತ್ತು. ತಮ್ಮ 17ನೇ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತರ್ ಅವರ `ಮಹಾಕವಿ ಕಾಳಿದಾಸ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

ಸರೋಜಾದೇವಿ ಅವರು ಕನ್ನಡ ಚಲನಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ನಟಿ. ಅವರನ್ನು ‘ಅಭಿನಯ ಸರಸ್ವತಿ’ ಎಂದು ಕರೆಯಲಾಗುತ್ತಿತ್ತು. ಸರೋಜಾದೇವಿ ಇಂದು ನಮ್ಮನ್ನು ಅಗಲಿದ್ದಾರೆ. ಮಹಾಕವಿ ಕಾಳಿದಾಸ, ಕಿತ್ತೂರು ಚೆನ್ನಮ್ಮ, ಅಣ್ಣಾ ತಮ್ಮ, ಭಕ್ತ ಕನಕದಾಸ, ಬಾಳೇ ಬಂಗಾರ, ನಾಗಕನ್ಯ, ಬೆಟ್ಟದ ಹೂವು, ಕಸ್ತೂರಿ ನಿವಾಸ ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ನಾಡೋಡಿ ಮನ್ನನ್, ಕರ್ಪೂರ ಕರಸಿ, ಪಾಂಡುರಂಗ ಮಹಾತ್ಯಂ, ತಿರುಮಣಂ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದರು.




