ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ, ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ (ಸೆಷನ್ಸ್) ನ್ಯಾಯಾಲಯವು ಜೀವಾವಧಿ ಕಾರಾಗೃಹ ವಾಸದ ಶಿಕ್ಷೆ ಪ್ರಕಟಿಸಿದೆ.

ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂಬುದು ಸಾಬೀತಾಗಿದ್ದು, ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಪ್ರಜ್ವಲ್ ರೇವಣ್ಣಗೆ ಜೀವನ ಪರ್ಯಂತ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್ ತೀರ್ಪು ನೀಡಿದ್ದಾರೆ.
ಇಲ್ಲಿಯವರೆಗೆ ಏನೇನಾಗಿದೆ..?
ಏಪ್ರಿಲ್ 2024: ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಲೈಂಗಿಕ ವಿಡಿಯೊಗಳಿರುವ ಪೆನ್ ಡ್ರೈವ್ ಹಾಸನದ ತುಂಬೆಲ್ಲಾ ಹರಿದಾಡಿತು
20ನೇ ಏಪ್ರಿಲ್ 2024: ಚುನಾವಣೆ ಸಂದರ್ಭದಲ್ಲೇ ಪ್ರಜ್ವಲ್
ಅವರ ವರ್ಚಸ್ಸಿಗೆ ಧಕ್ಕೆಯನ್ನುಂಟು ಮಾಡಲು ಪೆನ್ ಡ್ರೈವ್ ಹಂಚಲಾಗುತ್ತಿದೆ ಎಂದು ಆರೋಪಿಸಿ ಚುನಾವಣಾ ಏಜೆಂಟ್ ಒಬ್ಬರು ಎಫ್ಐಆರ್ ದಾಖಲಿಸಿದ್ದರು
26ನೇ ಏಪ್ರಿಲ್ 2024: ಲೋಕಸಭಾ ಚುಣಾವಣೆ ಪೂರ್ಣಗೊಂಡ ಬಳಿಕ, ರಾಜತಾಂತ್ರಿಕ ಪಾಸ್ಪೋರ್ಟ್ ಬಳಸಿ ಪ್ರಜ್ವಲ್ ವಿದೇಶ ಪ್ರಯಾಣ
27ನೇ ಏಪ್ರಿಲ್ 2024: ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಿದ ರಾಜ್ಯ ಸರ್ಕಾರ
30ನೇ ಏಪ್ರಿಲ್ 2024: ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ ಜೆಡಿಎಸ್
2ನೇ ಮೇ 2024: ಪ್ರಜ್ವಲ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯಿಂದ ಲೈಂಗಿಕ ದೌರ್ಜನ್ಯ ದೂರು ದಾಖಲು. ರೇವಣ್ಣ ಹೆಸರು ಉಲ್ಲೇಖ.
3ನೇ ಮೇ 2024: ಅಪಹರಣಕ್ಕೊಳಗಾಗಿದ್ದ ದೂರರಾರರನ್ನು ಮೈಸೂರು ಬಳಿಯ ಫಾರ್ಮ್ಹೌಸ್ ಬಳಿ ರಕ್ಷಣೆ
4ನೇ ಮೇ 2024: ಅಪಹರಣ ಪ್ರಕರಣದಲ್ಲಿ ರೇವಣ್ಣ ಬಂಧನ
7ನೇ ಮೇ 2024: ಎಸ್ಐಟಿ ಎದುರು ಹಾಜರಾಗುವಂತೆ ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ
31ನೇ ಮೇ 2024: ಭಾರತಕ್ಕೆ ಬಂದ ಪ್ರಜ್ವಲ್, ಮಹಿಳಾ ಅಧಿಕಾರಿಗಳನ್ನೇ ಒಳಗೊಂಡ ಎಸ್ಐಟಿ ತಂಡದಿಂದ ಬಂಧನ
8ನೇ ಸೆಪ್ಟೆಂಬರ್ 2024: ಪ್ರಜ್ವಲ್ ವಿರುದ್ಧ ದೋಷಾರೋಪ ಸಲ್ಲಿಸಿದ ಎಸ್ಐಟಿ
2ನೇ ಮೇ 2025: ವಿಚಾರಣೆ ಆರಂಭಿಸಿದ ನ್ಯಾಯಾಲಯ
18ನೇ ಜುಲೈ 2025: ವಿಚಾರಣೆ ಪೂರ್ಣ
1ನೇ ಆಗಸ್ಟ್ 2025: ಪ್ರಜ್ವಲ್ ದೋಷಿ ಎಂದು ಸಾಬೀತು
ಕೇವಲ 4 ತಿಂಗಳ ದಾಖಲೆ ಸಮಯದಲ್ಲೇ ಜಡ್ಜ್ ಸಂತೋಷ್ ಗಜಾನನ ಭಟ್ ತೀರ್ಪು ಪ್ರಕಟಿಸಿದ್ದಾರೆ. ಇದರೊಂದಿಗೆ, ಮೂರು ಅತ್ಯಾಚಾರ ಪ್ರಕರಣ, 1 ಲೈಂಗಿಕ ದೌರ್ಜನ್ಯ ಹೀಗೆ ಒಟ್ಟು 4 ಪ್ರಕರಣಗಳ ಪೈಕಿ ಒಂದರಲ್ಲಿ ತೀರ್ಪು ಹೊರಬಿದ್ದಂತಾಗಿದೆ. ಪ್ರಜ್ವಲ್ ರೇವಣ್ಣ ತಪ್ಪಿತಸ್ಥ ಎಂಬುದು ಸಾಬೀತಾಗಿದೆ. ಪ್ರಜ್ವಲ್ ದೋಷಿ ಎಂದು ಶುಕ್ರವಾರ ತೀರ್ಪು ನೀಡಿದ್ದ ಕೋರ್ಟ್, ಶಿಕ್ಷೆ ಪ್ರಮಾಣದ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿತ್ತು. ಇಂದು ಬೆಳಗ್ಗೆ ನಡೆದ ವಾದ-ಪ್ರತಿವಾದ ಆಲಿಸಿದ ಜಡ್ಜ್ ಸಂತೋಷ್ ಗಜಾನನ ಭಟ್ ಅಂತಿಮವಾಗಿ ಇದೀಗ ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದಾರೆ.
ಇದಕ್ಕೂ ಮುನ್ನ ಪ್ರಾಸಿಕ್ಯೂಷನ್ ಪರ ವಕೀಲರಾದ ಬಿಎನ್ ಜಗದೀಶ್, ಎಸ್ಪಿಪಿ ಅಶೋಕ್ ನಾಯಕ್ ವಾದ ಮಂಡಿಸಿ ಪ್ರಜ್ವಲ್ಗೆ ಗರಿಷ್ಠ ಶಿಕ್ಷೆ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅದಾದ ನಂತರ ವಾದ ಮಂಡನೆ ಮಾಡಿದ್ದ ಪ್ರಜ್ವಲ್ ಪರ ವಕೀಲೆ ನಳಿನಿ ಮಾಯೇಗೌಡ, ಶಿಕ್ಷೆ ನೀಡುವ ವೇಳೆ ಅಪರಾಧಿಯ ರಾಜಕೀಯ ಭವಿಷ್ಯ, ವಯಸ್ಸು ಇತ್ಯಾದಿಗಳನ್ನೆಲ್ಲ ಪರಿಗಣಿಸಬೇಕು ಎಂದು ಮನವಿ ಮಾಡಿದ್ದರು.
ನಂತರ ಪ್ರಜ್ವಲ್ ಅಭಿಪ್ರಾಯವನ್ನು ನ್ಯಾಯಾಲಯ ಕೋರಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಪ್ರಜ್ವಲ್, ಸಂಸದನಾಗಿದ್ದಾಗ ಯಾರೂ ಆರೋಪ ಮಾಡಿರಲಿಲ್ಲ. ಆಗ ಏಕೆ ಆರೋಪಿಸಿರಲಿಲ್ಲ? ಚುನಾವಣೆ ಸಮಯದಲ್ಲಿಯೇ ಯಾಕೆ ಹಾಗೆ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದರಲ್ಲದೆ, ನ್ಯಾಯಾಲಯ ಏನೇ ತೀರ್ಮಾನ ಕೈಗೊಂಡರೂ ಅದನ್ನು ಒಪ್ಪಿಕೊಳ್ಳುತ್ತೇನೆ ಎಂದಿದ್ದರು.
ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ 2024ರ ಲೋಕಸಭೆ ಚುನಾವಣೆ ಸಂದರ್ಭ ಸರಣಿ ಅತ್ಯಾಚಾರ ಆರೋಪ ಕೇಳಿಬಂದಿತ್ತು. ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದವು. ಇದರಲ್ಲಿ ಮೈಸೂರಿನ ಕೆಆರ್ ನಗರದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪವೂ ಒಂದಾಗಿದೆ. ಅತ್ಯಾಚಾರ ಪ್ರಕರಣ ಬೆಳಕಿಗೆ ಬರಬಾರದು ಎಂದು ಮಹಿಳೆಯನ್ನು ಅಪಹರಿಸಿ ಹುಣಸೂರು ಬಳಿಯ ತೋಟದ ಮನೆಯಲ್ಲಿ ಕೂಡಿಹಾಕಲಾಗಿತ್ತು ಎಂಬ ಆರೋಪದ ಅಡಿ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಸೇರಿದಂತೆ ಒಟ್ಟು 9 ಆರೋಪಿಗಳಿದ್ದಾರೆ. ಹೆಚ್ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಒಂದು ವರ್ಷದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಪ್ರಕರಣ ಸಂಬಂಧ 2024ರ ಮೇ 31ರಂದು ಪ್ರಜ್ವಲ್ ರೇವಣ್ಣರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಅವರು ದೋಷಿ ಎಂದು ಸಾಬೀತಾಗಿದ್ದು, ಶಿಕ್ಷೆಯಾಗಿದೆ.




