ಮಂಗಳೂರು: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹಗಳ ಪತ್ತೆಗೆ GPR ಬಳಕೆ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ.

ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳ ಪತ್ತೆ ಕಾರ್ಯಾಚರಣೆಯಲ್ಲಿ 2 GROUND PENETRATING RADAR (ಗೌಂಡ್ ಪೆನೇಟ್ರೇಟಿಂಗ್ ರೇಡಾರ್- ಜಿಪಿಆರ್) ಗಳನ್ನು ಬಳಸುವಂತೆ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ಎಂಬುವರ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಎನ್. ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸುಜಾತಾ ಭಟ್, ‘ಸಾಕ್ಷಿ-ದೂರುದಾರ ಈಗಾಗಲೇ ತೋರಿಸಿ ಅಗೆಸಿರುವ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಭಾರತದಲ್ಲಿ ಬಳಕೆಯಲ್ಲಿರುವ ಅತ್ಯಾಧುನಿಕ -GROUND PENETRATING RADAR ಅನ್ನು ಬಳಸಿ ಕಳೇಬರಗಳ ಪತ್ತೆ ಕಾರ್ಯಾಚರಣೆ ನಡೆಸುವಂತೆ’ ವಿಶೇಷ ತನಿಖಾ ತಂಡಕ್ಕೆ ಮನವಿ ಮಾಡಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ದೂರುದಾರ ತೋರಿರುವ 10 ಸ್ಥಳಗಳಲ್ಲಿ ಅಗೆದಾಗ ಕೆಲವು ಸ್ಥಳಗಳಲ್ಲಿ ಕಳೇಬರಗಳು ಪತ್ತೆಯಾಗಿವೆ ಎಂಬುದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಸಾಕ್ಷಿಯೇ ಹೇಳಿರುವಂತೆ, ಆತ ಧರ್ಮಸ್ಥಳವನ್ನು 2014ರಲ್ಲಿಯೇ ತೊರೆದಿದ್ದಾನೆ. ಅಪಾರ ಮಳೆಯನ್ನು ಕಾಣುವ ಧರ್ಮಸ್ಥಳ ಪ್ರದೇಶದಲ್ಲಿ ಮಣ್ಣು ಒಂದೆಡೆಯಿಂದ ಮತ್ತೊಂದೆಡೆಗೆ ಹರಿದು ಶೇಖರಣೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಅಲ್ಲದೇ ಸುಮಾರು 11 ವರ್ಷಗಳಲ್ಲಿ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈ ಕಾರಣಕ್ಕೆ ಸಾಕ್ಷಿದಾರ ತನ್ನ ನೆನಪಿನಲ್ಲಿ ಇಟ್ಟುಕೊಂಡ ಗುರುತುಗಳಲ್ಲಿ ಬದಲಾವಣೆಯಾಗಿರುವ ಸಾಧ್ಯತೆಯೂ ಅಧಿಕವಾಗಿದೆ. ಆದ್ದರಿಂದ, ನಾವು ಈಗಾಗಲೇ (ಜುಲೈ 29ರಂದು) ಮನವಿ ಮಾಡಿಕೊಂಡಂತೆ, ಸದ್ಯ ಅಗೆಯಲಾಗಿರುವ ಸ್ಥಳಗಳಲ್ಲಿ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಕಳೇಬರಗಳ ಪತ್ತೆಗೆ ಅತ್ಯಾಧುನಿಕ GROUND PENETRATING RADAR (ಜಿಪಿಆರ್) ಗಳನ್ನು ಬಳಸುವಂತೆ ಕೇಳಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಹುಲ್ಲುಕಡ್ಡಿಯನ್ನು ತೆರವುಗೊಳಿಸಲು ಉಪಯೋಗಿಸುವ ಯಂತ್ರದಷ್ಟು ಗಾತ್ರವಿರುವ ಈ ಜಿಪಿಆರ್ ಗಳನ್ನು ಕೆಲವೇ ವ್ಯಕ್ತಿಗಳನ್ನು ನಿಯೋಜಿಸಿ ಬಳಸಬಹುದು. ಆದ್ದರಿಂದ ದೂರುದಾರ ಗುರುತಿಸಿರುವ ಜಾಗಗಳ ಪೈಕಿ ಈಗಾಗಲೇ ಅಗೆದಿರುವ ಸ್ಥಳಗಳಲ್ಲಿ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಕಳೇಬರಗಳ ಪತ್ತೆಗೆ ಜಿಪಿಆರ್ ಬಳಸಬೇಕು ಎಂದು ವಕೀಲ ಮಂಜುನಾಥ್ ಎನ್. ಒತ್ತಾಯಿಸಿದ್ದಾರೆ.
ಅಂತೆಯೇ ಹಾಲಿ ನಡೆಯುತ್ತಿರುವ ಶೋಧ ಪ್ರಕ್ರಿಯೆಗೆ ಅವರು SIT ಯನ್ನು ಶ್ಲಾಘಿಸಿದರು. “ಪ್ರಣಬ್ ಮೊಹಂತಿ ನೇತೃತ್ವದ ಎಸ್‌ಐಟಿ ಜಿಪಿಆರ್ ತಂತ್ರಜ್ಞಾನವನ್ನು ಕಾರ್ಯಗತಗೊಳಿಸುತ್ತದೆ ಎಂದು ಅನೇಕ ತಜ್ಞರು ನಿರೀಕ್ಷಿಸುತ್ತಾರೆ. ಜಿಪಿಆರ್‌ಗಳನ್ನು ನಿಯೋಜಿಸುವಲ್ಲಿ ಕರ್ನಾಟಕ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‌ಐಟಿಗೆ ಬೆಂಬಲ ನೀಡುತ್ತಾರೆ ಎಂಬ ನಂಬಿಕೆ ಮತ್ತು ವಿಶ್ವಾಸ ನಮಗಿದೆ” ಎಂದು ಅವರು ಹೇಳಿದ್ದಾರೆ.




