ಲಂಚ ಪಡೆಯುತ್ತಿದ್ದ ವೇಳೆ ದಾಳಿ ಪೆರುವಾಯಿ ಗ್ರಾ.ಪಂ.ಅಧ್ಯಕ್ಷೆ ನಫೀಸಾ, ಬಿಲ್ ಕಲೆಕ್ಟರ್ ವಿಲಿಯಂ ಲೋಕಾಯುಕ್ತ ಬಲೆಗೆ..!

Share with

ಪುತ್ತೂರು: ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫೀಸಾ ಮತ್ತು ಬಿಲ್ ಕಲೆಕ್ಟರ್ ವಿಲಿಯಂ ಅವರನ್ನು ಬಲೆಗೆ ಕೆಡವಿದ ಘಟನೆ ಸೆ. 6ರಂದು ನಡೆದಿದೆ.

ಘಟನೆಯ ವಿವರ:

ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದಲ್ಲಿ 1 ಎಕ್ರೆ ಕೃಷಿ ಜಮೀನು ಹೊಂದಿರುವ ವ್ಯಕ್ತಿಯೋರ್ವರಿಗೆ ನೀರಿನ ವ್ಯವಸ್ಥೆ ಇಲ್ಲದ ಕಾರಣ ಅವರು ಪೆರುವಾಯಿ ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಿ ಸರ್ಕಾರದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ತಮ್ಮ ಜಾಗಕ್ಕೆ ಒಂದು ಕೊಳವೆ ಬಾವಿ ಮಾಡಿಕೊಡಲು 2024 ರಲ್ಲಿ ಮನವಿ ಸಲ್ಲಿಸಿದ್ದರು. ಪೆರುವಾಯಿ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗೆ ಅವರು ಅರ್ಜಿ ಸಲ್ಲಿಕೆ ಮಾಡಿದ್ದರು. 2024ನೇ ಸಾಲಿನಲ್ಲಿ ಪೆರುವಾಯಿ ಗ್ರಾಮ ಪಂಚಾಯತಿನವರು ಸತಾಯಿಸಿದ್ದರೂ ಕೊಳವೆ ಬಾವಿ ಲಿಸ್ಟ್‌ನಲ್ಲಿ ಹೆಸರು ಸೇರಿಸಿರಲಿಲ್ಲ. ನಂತರ 2025 ನೇ ಇಸವಿಯಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಸರ್ಕಾರ ಕೃಷಿಕರಿಗೆ ಕೊಳವೆ ಬಾವಿ ಮಾಡಿಕೊಡುತ್ತಿರುವ ಕುರಿತು ತಿಳಿದು ಬಂದಾಗ ಮೇ 2025ರಲ್ಲಿ ಕೊಳವೆ ಬಾವಿಗೆ ಅರ್ಜಿ ಸಲ್ಲಿಸಿದ್ದರು. ನಂತರ ಅರ್ಜಿದಾರರ ಪತ್ನಿ ಪೆರುವಾಯಿ ಗ್ರಾಮ ಪಂಚಾಯತ್ ಕಛೇರಿಗೆ ಎರಡು ಮೂರು ಬಾರಿ ಹೋಗಿ ವಿಚಾರಿಸಿದರೂ ಸರಿಯಾಗಿ ಪ್ರತಿಕ್ರಿಯೆ ನೀಡಿರಲಿಲ್ಲ. ಅರ್ಜಿದಾರರ ಮಾವನಿಗೆ ಸುಮಾರು 75 ವರ್ಷ ವಯಸ್ಸಾಗಿದ್ದು ಅವರಿಗೆ ಅಸೌಖ್ಯ ಇದ್ದುದರಿಂದ ಅರ್ಜಿದಾರರನ್ನು ಕರೆದು ಕೊಳವೆ ಬಾವಿ ಬಗ್ಗೆ ಪಂಚಾಯತ್‌ಗೆ ಹೋಗಿ ವಿಚಾರಿಸಿಕೊಂಡು ಬರುವಂತೆ ತಿಳಿಸಿದ್ದರು. ಅದರಂತೆ ಅರ್ಜಿದಾರರು 02.09.2025 ರಂದು ಪೆರುವಾಯಿ ಗ್ರಾಮ ಪಂಚಾಯತ್‌ ಕಚೇರಿಗೆ ಹೋಗಿ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ನೆಫಿಸ್ಸಾ ಅವರಲ್ಲಿ ತನ್ನ ಮಾವನವರ ಹೆಸರಿಗೆ ಕೊಳವೆ ಬಾವಿ ಮಂಜೂರು ಆಗಿದೆಯೇ ಎಂಬ ಬಗ್ಗೆ ವಿಚಾರಿಸಿದಾಗ ‘ನಿಮಗೆ ಬೋರ್‌ವೆಲ್ ಫ್ರೀ ಆಗುತ್ತದೆ, ಬೆಂಗಳೂರು ಆಫೀಸ್‌ಗೆ ಹತ್ತು ಸಾವಿರ ಕೊಡಲು ಇದೆ. ಹಣ ಕೊಟ್ಟರೆ ಅವರು ಪಾಸ್ ಮಾಡುತ್ತಾರೆ. ತಾನು ಬೆಂಗಳೂರಿಗೆ ಹೋಗಿ ನಿಮ್ಮ ಕೆಲಸ ಮಾಡಿಸುತ್ತೇನೆ. ಹಣ ತಗೊಂಡು ಬನ್ನಿ. ನೀವು ಹಣ ಕೊಟ್ಟರೆ ಮಾತ್ರ ನಿಮಗೆ ಬೋರ್‌ವೆಲ್ ಪಾಸ್ ಮಾಡಿಸಿ ಕೊಡುತ್ತೇನೆ’ ಎಂದು ನೆಫಿಸಾ ಹೇಳಿದ್ದಾರೆ. ಊ ವೇಳೆ ಅರ್ಜಿದಾರರು ತನ್ನಲ್ಲಿ ಅಷ್ಟು ಹಣ ಇಲ್ಲ ಎಂದು ಹೇಳಿ ವಾಪಸ್ ಬಂದಿದ್ದಾರೆ. ನಂತರ 04.09.2025ರಂದು ವಾಪಸ್ ಗ್ರಾಮ ಪಂಚಾಯತ್‌ ಅಧ್ಯಕ್ಷೆ ನೆಫಿಸಾ ಅವರಲ್ಲಿ ಬೋರ್‌ವೆಲ್ ಹಾಕಿಸಿ ಕೊಡಲು ಕೇಳಿಕೊಂಡಾಗ ಗ್ರಾಮ ಪಂಚಾಯತ್‌ ಅಧ್ಯಕ್ಷೆ ನೆಫಿಸಾರವರು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಬೋರ್‌ವೆಲ್ ಹಾಕಿಸಿ ಕೊಡಲು ರೂ ಹತ್ತು ಸಾವಿರ ರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ. 06.09.2025 ರಂದು ನಫುಸಾ ಅವರು ಬಿಲ್ ಕಲೆಕ್ಟರ್ ವಿಲಿಯಂ ರವರಿಗೆ ಅರ್ಜಿದಾರರಿಂದ ಹತ್ತು ಸಾವಿರ ರೂ ಲಂಚದ ಹಣವನ್ನು ಪಡೆದುಕೊಳ್ಳಲು ಸೂಚಿಸಿದಂತೆ ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಊ ಹಿನ್ನೆಲೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ನಫಿಸ್ಸಾ‌ ಮತ್ತು ಬಿಲ್ ಕಲೆಕ್ಟರ್ ವಿಲಿಯಂ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ರವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ. ಕುಮಾರ್, ಸುರೇಶ್ ಕುಮಾರ್.ಪಿ, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್ ಮತ್ತು ರವಿ ಪವಾರ್ ರವರು ಮಂಗಳೂರು ಲೋಕಾಯುಕ್ತ ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದರು.


Share with

Leave a Reply

Your email address will not be published. Required fields are marked *